ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.18: ಕೇವಲ ರಾಜಕೀಯಕ್ಕಾಗಿ ಬಿಜೆಪಿ ತೊರೆದಿರುವ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ನಲ್ಲಿ ಸ್ಥಾನಮಾನ ಏನು? ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗರು ಲಿಂಗಾಯತರನ್ನು ಒಡೆಯಲು ಮುಂದಾಗಿದ್ದರು. ಶೆಟ್ಟರ್ ಸಿಎಂ ಅಭ್ಯರ್ಥಿಯೇ? ಅಥವಾ ಅವರ ಸ್ಥಾನಮಾನ ಏನು. ಕಾಂಗ್ರೆಸ್ನಲ್ಲಿ ಈಗಾಗಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಹಲವು ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ. ಹಾಗಿದ್ದಾಗ ಶೆಟ್ಟರ್ ಅವರಿಗೆ ಯಾವ ಸ್ಥಾನ ಸಿಗುತ್ತದೆ ಎಂದು ಪ್ರಶ್ನಿಸಿದರು.
ಜಗದೀಶ ಶೆಟ್ಟರ್ ಅವರ ಕುಟುಂಬದವರು ಜನಸಂಘದ ಕಾಲದಿಂದಲೇ ಆ ಪಕ್ಷದ ಕಾರ್ಯಕರ್ತರು. ವಾಜಪೇಯಿ, ಅಡ್ವಾಣಿ ಮತ್ತಿತರರು ಹುಬ್ಬಳ್ಳಿಗೆ ಬಂದಾಗ ಅವರ ಮನೆಯಲ್ಲೇ ಇರುತ್ತಿದ್ದರು. ಉಡುಪಿಯ ಡಾ. ವಿ.ಎಸ್.ಆಚಾರ್ಯರ ಕುಟುಂಬದಂತೆ ಅವರದು ಕೂಡ ಸಿದ್ಧಾಂತ, ವಿಚಾರಧಾರೆ ಒಪ್ಪಿದ ಕುಟುಂಬ. ಇವತ್ತು ಶೆಟ್ಟರ್ ಕಾಂಗ್ರೆಸ್ ಮನೆ ಸೇರಿ ಅಲ್ಲಿದ್ದಾರೆ. ಕಾಂಗ್ರೆಸ್ ಕುಟುಂಬ ಸದಸ್ಯರಾಗಿ ತೆರಳಿದ್ದಾರೆ. ಜೀವನಪರ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿ ರಾಜಕೀಯದ ಕೊನೆಯ ಅವಧಿಯಲ್ಲಿ ಕಾಂಗ್ರೆಸ್ಸನ್ನು ಸೇರಿದ್ದಾರೆ. ಧ್ವಜ ಬದಲಿಸಿದರೆ ಅವರ ವಿಚಾರವೂ ಬದಲಾಗುವುದೇ ಎಂದು ಕೇಳಿದರು.
ಕೇವಲ ರಾಜಕೀಯಕ್ಕಾಗಿ ಪಕ್ಷ ತೊರೆದವರಿಗೆ ಜನತೆ ಪಾಠ ಕಲಿಸಲಿದ್ದಾರೆ. ಪಕ್ಷ ಬಿಟ್ಟು, ವಿಚಾರ ಬಿಟ್ಟು ಹೋದುದು ಬೇಸರ ತಂದಿದೆ. ಅವರು ಹೇಳಿದ ಒಂದೊಂದು ಮಾತಿನಲ್ಲಿ ಅರ್ಥವಿದೆ. ಬಿಜೆಪಿ ನಿಮ್ಮನ್ನು ಬೆಳೆಸಿದೆ. ಹೋದ ಮೇಲೆ ಹುಳುಕು ಹುಡುಕದಿರಿ. ನಿಮ್ಮ ಕೆಲಸ ನೀವು ಮಾಡಿ. ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ತಿಳಿಸಿದರು.
ಪಕ್ಷ, ವಿಚಾರಧಾರೆ ಬೆಳೆಸಲು ಬಿ.ಎಲ್.ಸಂತೋಷ್ ಮುಂದಾದವರು. ಅವರು ಶೆಟ್ಟರ್ ಅವರಿಗೆ ಸ್ಪರ್ಧಿಯೂ ಅಲ್ಲ ಎಂದ ಅವರು, ಹುಬ್ಬಳ್ಳಿ- ಧಾರವಾಡದಲ್ಲಿ ಬಿಜೆಪಿ ಗೆಲುವು ಖಚಿತ. ಕಾಂಗ್ರೆಸ್ ಗೆಲ್ಲುವುದಿಲ್ಲ. ಜನರು ಕಾಂಗ್ರೆಸ್ ಗೆಲ್ಲಿಸುವುದಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ರಾಷ್ಟ್ರೀಯ ಮಾಧ್ಯಮ ಸಹ-ಸಂಚಾಲಕರು ಸಂಜಯ್ ಮಯಾಂಕ್, ತಮಿಳುನಾಡು ಬಿಜೆಪಿ ಮುಖ್ಯ ವಕ್ತಾರ ರಂಗನಾಯಕಲು, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಗುಜರಾತ್ ಮಾಧ್ಯಮ ಸಂಚಾಲಕ ಯಜ್ಞೇಶ್ ಧವೆ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.