ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 11: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಈಗಲೇ ಸಿದ್ಧತೆ ಮಾಡಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಅದಕ್ಕೆ ಬೇಕಾದ ಪೂರ್ವಸಿದ್ಧತೆಗಳನ್ನು ಮಾಡುವಲ್ಲಿ ಬಿರುಸಿನ ಚಟುವಟಿಕೆ ಆರಂಭಿಸಿದೆ.
ಮತದಾನ ಮುಗಿದ ರಾತ್ರಿಯೇ ರಾಜ್ಯಕ್ಕೆ ಆಗಮಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಗುರುವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹಿತ ಹಲವು ಮುಖಂಡರೊಂದಿಗೆ ಸರಣಿ ಸಭೆಗಳನ್ನು ನಡೆಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೋಡೆತ್ತುಗಳಂತೆ ಕೆಲಸ ಮಾಡಿದ್ದಾರೆ. ಅಧಿಕಾರ ಸಿಕ್ಕ ಬಳಿಕ ಗೊಂದಲ ಆಗಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ವರಿಷ್ಠರು ಇಬ್ಬರ ನಡುವೆ ಸಮನ್ವಯತೆ ತರುವ ಬಗ್ಗೆಯೂ ಗಂಭೀರ ಕ್ರಮಗಳನ್ನು ಕೈಗೊಂಡಿದ್ದಾರೆ.
ಮತ್ತೊಂದೆಡೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಗುರುವಾರ ರಾತ್ರಿ 224 ಕ್ಷೇತ್ರಗಳ ಅಭ್ಯರ್ಥಿಗಳೊಂದಿಗೂ ಝೂಮ್ ಮೂಲಕ ಸಭೆ ನಡೆಸಿದ್ದಾರೆ. ಸರ್ಕಾರಕ್ಕೆ ಪೂರ್ಣ ಬಹುಮತ ಬಂದರೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ಅತಂತ್ರವಾದರೆ ಯಾವ ಶಾಸಕರೂ ಸಹ ಗೊಂದಲಕ್ಕೆ ಒಳಗಾಗಬಾರದು. ಪಕ್ಷ ತೆಗೆದುಕೊಳ್ಳುವ ತೀರ್ಮಾನಗಳಿಗೆ ಎಲ್ಲರೂ ಬದ್ಧರಾಗಿರಬೇಕು ಎಂಬ ಸಂದೇಶ ರವಾನಿಸಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಗೆ ಪೂರ್ಣ ಬಹುಮತ ಬರದೆ ಸರ್ಕಾರ ರಚಿಸಲು ಕೆಲವೇ ಸ್ಥಾನಗಳು ಬೇಕಾದರೆ ಏನು ಮಾಡಬಹುದು ಎಂಬ ಬಗ್ಗೆಯೂ ಕಾಂಗ್ರೆಸ್ ನಾಯಕರು ಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ರಾಜಕೀಯ ತಂತ್ರಗಾರಿಕೆ ಚರ್ಚೆ, ಮಾತುಕತೆಗಳು ನಡೆದಿವೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ನಲ್ಲಿ ಫಲಿತಾಂಶಕ್ಕೂ ಮುನ್ನ ಘಟಾನುಘಟಿ ನಾಯಕರಿಂದ ರಣತಂತ್ರಗಳು ನಡೆಯುತ್ತಿದ್ದು ಸರಣಿ ಸಭೆಗಳು ನಡೆಯುತ್ತಿವೆ. ಸುರ್ಜೆವಾಲಾ ಮತ್ತು ಸಿದ್ದರಾಮಯ್ಯ ನಡುವೆ ಸುಮಾರು 2 ಗಂಟೆಗಳ ಕಾಲ ಮಾತುಕತೆ ನಡೆಯಿತು. ಸುರ್ಜೇವಾಲ ಅವರು ಡಿ.ಕೆ. ಶಿವಕುಮಾರ್ ಜೊತೆಯೂ ಸಹ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಶತಾಯಗತಾಯ ಈ ಬಾರಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಡದೆ ಸರ್ಕಾರ ರಚಿಸಲು ಕಾಂಗ್ರೆಸ್ ಶತಪ್ರಯತ್ನ ಮಾಡುತ್ತಿದೆ. ಬಹುಮತ ಬಂದರೆ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ, ಒಂದು ವೇಳೆ ಬಹುಮತ ಬಾರದಿದ್ದರೆ ಆಪರೇಷನ್ ಹಸ್ತ ನಡೆಸುವ ವಿಚಾರ ಮತ್ತು ಬಿಜೆಪಿಗೆ ಶಾಸಕರು ಹೋಗದಂತೆ ಹೇಗೆ ಹಿಡಿದಿಟ್ಟುಕೊಳ್ಳಬೇಕು ಎಂಬ ಬಗ್ಗೆ ಕೂಡ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಮಧ್ಯಾಹ್ನ ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮುಂದಿನ ಮುಖ್ಯಮಂತ್ರಿ ಸ್ಥಾನ, ಯಾವ ದಿನ ಪ್ರಮಾಣ ವಚನ ಸ್ವೀಕರಿಸಬೇಕು, ಕ್ಯಾಬಿನೆಟ್ ಸಚಿವರ ಆಯ್ಕೆ ಮುಂತಾದ ಆಗುಹೋಗುಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಬಹುಮತದ ಕೊರತೆಯಾದಲ್ಲಿ ಹಳೆ ಮೈಸೂರು ಭಾಗ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಅವರಿಗೆ ಆಪ್ತರಾದವರು ಮತ್ತು ಸ್ವಂತ ಬಲದಿಂದ ಗೆದ್ದುಬರುವ ಸಾಮರ್ಥ್ಯ ಇರುವ ಶಾಸಕರು ಯಾರಾಗಬಹುದು, ಅವರನ್ನು ಪಕ್ಷಕ್ಕೆ ಸಳೆದರೆ ಹೇಗೆ ಎಂಬಂತಹ ಚರ್ಚೆಗಳೂ ಸಿದ್ದರಾಮಯ್ಯ ಅವರೊಂದಿಗೆ ನಡೆದಿವೆ ಎಂದು ಹೇಳಲಾಗುತ್ತಿದೆ.