ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.17: ಜಗದೀಶ್ ಶೆಟ್ಟರ್ ಹಾಗೂ ಅಮರ ಸಿಂಗ್ ಪಾಟೀಲ್ ಅವರು ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇವರಿಬ್ಬರನ್ನು ತುಂಬು ಹೃದಯದಿಂದ ಪಕ್ಷಕ್ಕೆ ಸ್ವಾಗತ ಕೋರುತ್ತೇನೆ. ನಮ್ಮ ಪಕ್ಷದ ನೀತಿ, ಸಿದ್ಧಾಂತ ಅವರಿಗೆ ತಿಳಿದಿದೆ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ, ತಮ್ಮ ಸ್ವಾಭಿಮಾನ ಕಾಪಾಡಿಕೊಳ್ಳಲು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಅನೇಕ ವರ್ಷಗಳಿಂದ ಒಂದು ಪಕ್ಷ ಕಟ್ಟಿ ಬೆಳೆಸಿ ಅದಕ್ಕೆ ಶಕ್ತಿಯಾಗಿ ಕೆಲಸ ಮಾಡಿದ್ದರು. ಅದೇ ರೀತಿ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಕೆಲಸ ಮಾಡುವ ವಿಶ್ವಾಸವಿದೆ. ಅವರ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಹೆಚ್ಚಿನ ಶಕ್ತಿ ಸಿಗುವ ವಿಶ್ವಾಸವಿದೆ.
ಪಾಟೀಲ್ ಅವರು ಸಂಸದರು, ಪರಿಷತ್ ಸದಸ್ಯರು, ಶಾಸಕರಾಗಿದ್ದರು. ಅವರ ತಂದೆ ಅವರು ಕೂಡ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇವರು ನೂರಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಇವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ.
ಶೆಟ್ಟರ್ ಅವರಿಗೆ ಜನಸಂಘದ ಹಿನ್ನೆಲೆ ಇದ್ದರೂ ಅವರೂ ಎಂದಿಗೂ ವಿವಾದವಿಲ್ಲದೇ ಕೆಲಸ ಮಾಡಿದಿದ್ದಾರೆ. ನಾವು ಸರ್ಕಾರದಲ್ಲಿದ್ದಾಗ ಅವರು ವಿರೋಧ ಪಕ್ಷದಲ್ಲಿದ್ದರು. ರಾಜಕೀಯವಾಗಿ ಜಟಾಪಟಿ ಇದ್ದರೂ ವೈಯಕ್ತಿಕವಾಗಿ ಎಂದಿಗೂ ಜಗಳವಾಡಿಲ್ಲ. ಅವರು ಬಹಳ ಸೌಮ್ಯವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ.
ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲುವಂತೆ ಮನವಿ ಮಾಡಿದ್ದರು. ಇಂದು ಶೆಟ್ಟರ್ ಅವರ ಪಕ್ಷ ಸೇರ್ಪಡೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ 150 ಕ್ಷೇತ್ರ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಅವರು ತಮ್ಮ ಕ್ಷೇತ್ರ ಮಾತ್ರವಲ್ಲ. ರಾಜ್ಯದ ಇತರೆ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಾಮರ್ಥ್ಯ ಅವರಿಗಿದೆ.