ಸುದ್ದಿಮೂಲ ವಾರ್ತೆ
ಮೈಸೂರು, ಸೆ.27: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಕಾವೇರಿ ಕ್ರಿಯಾ ಸಮಿತಿಯಿಂದ ಶುಕ್ರವಾರ ಕರೆ ನೀಡಿರುವ ಬಂದ್ ಮೈಸೂರು, ಚಾಮರಾಜನಗರ ಸೇರಿದಂತೆ ಕಾವೇರಿ ಕೊಳ್ಳದ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ತುರ್ತು ಸೇವೆ ಹೊರತುಪಡಿಸಿ ಎಲ್ಲಾ ಸೇವೆಗಳೂ ಬಂದ್ ಆಗಲಿವೆ.
ಗುರುವಾರ ಸಂಘಟನೆಗಳ ಕಾರ್ಯಕರ್ತರು ಸಭೆ ನಡೆಸಿ ಬಂದ್ ಯಶಸ್ವಿ ಮಾಡುವ ಬಗ್ಗೆ ಚರ್ಚಿಸಿ ಜನರನ್ನು ಮಾತ್ರವೇ ಅಲ್ಲ, ವರ್ತಕರು ಸಹ ಬಂದ್ ನಲ್ಲಿ ಭಾಗವಹಿಸುವಂತೆ ಮಾಡಲು ಮನವಿ ಮಾಡಲು ನಿರ್ಧರಿಸಲಾಯಿತು. ಹಲವು ಸಂಘಟನೆಗಳು, ಬಸ್, ಲಾರಿ, ಟ್ಯಾಕ್ಸಿ, ಆಟೋ ಚಾಲಕರು, ಮಾಲೀಕರ ಬೆಂಬಲ ಸೂಚಿಸಿದ್ದಾರೆ.
ಬಂದ್ ಸಂಬಂಧ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ನಡೆದ ಬಂದ್ ಸಭೆಯಲ್ಲಿ ಹಲವು ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು. ಬೆಳಗ್ಗೆ 6 ರಿಂದ ಕೇಂದ್ರ ಬಸ್ ನಿಲ್ದಾಣದ ಬಳಿಯಿಂದ ರಸ್ತೆ ತಡೆ ನಡೆಸಲಾಗುವುದು. ಕರ್ನಾಟಕ ರಕ್ಷಣಾ ವೇದಿಕೆ, ಮೈಸೂರು ರಕ್ಷಣಾ ವೇದಿಕೆ, ಕರ್ನಾಟಕ ಸೇನಾ ಪಡೆ ಸೇರಿ ಹಲವು ಸಂಘಟನೆಗಳಿಂದ ಪ್ರತಿಭಟನೆಯಲ್ಲಿ ಭಾಗವಹಿಸುತ್ತವೆ.
ಈ ಗುಲಾಬಿ ಹೂ ಬಂದ್ಗಾಗಿ
ನಗರದ ಅರಸು ರಸ್ತೆಯಲ್ಲಿ ಪ್ರತಿ ಅಂಗಡಿಗೆ ತೆರಳಿ ಗುಲಾಬಿ ಹೂ ವಿತರಿಸುವ ಮೂಲಕ ನಾಳೆ ಸ್ವಯಂ ಪ್ರೇರಿತ ಬಂದ್ ಮಾಡುವ ಮೂಲಕ ಕಾವೇರಿ ಹೋರಾಟಕ್ಕೆ ನಿಮ್ಮ ಬೆಂಬಲ ಸೂಚಿಸಿ ಎಂದು ವಿಷ್ಣುವರ್ಧನ್ ಅಭಿಮಾನಿಗಳು ಮನವಿ ಮಾಡಿದರು.
ತಮಿಳು ಒಕ್ಕೂಟ ಬೆಂಬಲ
ಕರ್ನಾಟಕ ಬಂದ್ಗೆ ಮೈಸೂರು ತಮಿಳು ಸಂಘಟನೆಗಳ ಒಕ್ಕೂಟದಿಂದ ಬಂದ್ ಗೆ ಬೆಂಬಲ ನೀಡಲಾಗುವುದು ಎಂದು ಅಧ್ಯಕ್ಷ ರಘುಪತಿ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನಮ್ಮ ಬಳಿ ನೀರು ಇದ್ದಾಗ ನಾವು ನೀರು ಕೊಟ್ಟಿದ್ದೇವೆ. ಈಗ ನಮ್ಮ ಬಳಿಯೇ ನೀರು ಇಲ್ಲ. ಈ ಪರಿಸ್ಥಿತಿಯಲ್ಲಿ ನೀರು ಕೊಡಲು ಸಾಧ್ಯವಿಲ್ಲ. ಇದನ್ನು ತಮಿಳುನಾಡಿನಲ್ಲಿ ಇರುವವರು ಅರ್ಥ ಮಾಡಿಕೊಳ್ಳಬೇಕು. ನಾವು ಹಿಂದಿನಿಂದಲೂ ಸದಾ ಕರ್ನಾಟಕದ ಪರ ಇರುತ್ತೇವೆ. ಬರಗಾಲ ಬಂದಾಗ ಈ ರೀತಿ ಪರಿಸ್ಥಿತಿ ಬರುತ್ತದೆ.ಇದಕ್ಕೆ ಶಾಶ್ವತವಾದ ಪರಿಹಾರ ಸರ್ಕಾರ ಕಂಡುಕೊಳ್ಳಬೇಕು. ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಬಾಳಬೇಕು ಎಂದು ಅವರು ಮಾಡಿದರು.