ಸುದ್ದಿಮೂಲ ವಾರ್ತೆ
ತುಮಕೂರು, ಅ. 3 : ಅಭಿವೃದ್ಧಿ ಹೆಸರಿನಲ್ಲಿ ಗಿಡ ಮರಗಳನ್ನು ಕಡಿದು ಅರಣ್ಯ ಪ್ರದೇಶವನ್ನು ನಾಶಪಡಿಸುತ್ತಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ ವನ್ಯಜೀವಿ ಸಂಕುಲಗಳು ವಿನಾಶದ ಅಂಚಿಗೆ ತಲುಪುತ್ತಿವೆ. ವನ್ಯಜೀವಿ ಸಂಕುಲದ ವಿನಾಶದಿಂದ ಮನುಕುಲಕ್ಕೆ ಉಳಿಗಾಲವಿಲ್ಲ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಎಚ್ಚರಿಕೆ ನೀಡಿದರು.
ನಗರದ ಎಂಪ್ರೆಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ದೇವರಾಯನದುರ್ಗ, ಬುಕ್ಕಾಪಟ್ಟಣ ಸೇರಿದಂತೆ ವಿವಿಧ ಅರಣ್ಯ ಪ್ರದೇಶದಲ್ಲಿ ಬೇರೆಲ್ಲೂ ಕಾಣಸಿಗದ ವಿವಿಧ ಪ್ರಭೇಧದ ಪಕ್ಷಿ ಹಾಗೂ ಹಾವಿನ ಸಂತತಿಗಳನ್ನು ಕಾಣಬಹುದಾಗಿದ್ದು, ಈ ಅಪರೂಪದ ಪ್ರಬೇಧಗಳನ್ನು ಸಂರಕ್ಷಿಸಬೇಕು. ಅರಣ್ಯ ಪ್ರದೇಶ
ಒತ್ತುವರಿ, ಪ್ರಾಣಿಗಳ ಬೇಟೆ, ಜಾಗತಿಕ ತಾಪಮಾನ ಏರಿಕೆ, ಪರಿಸರ ನಾಶದಿಂದ ವನ್ಯ ಜೀವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮಧುಗಿರಿ ಭಾಗದಲ್ಲಿ ಕೃಷ್ಣಾಮೃಗಗಳ ಅರಣ್ಯಧಾಮ ಎಂದು ಘೋಷಿಸಿರುವ ಕಾರಣ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವುದರಿಂದಲೂ ವನ್ಯಜೀವಿ ಸಂತತಿ ನಾಶವಾಗುತ್ತಿವೆ. ಗಿಡ-ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಿದಲ್ಲಿ ಜಾಗತಿಕ ತಾಪಮಾನದ ಪ್ರಮಾಣವನ್ನು ತಗ್ಗಿಸಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಪರಿಸರ ನಾಶವಾದರೆ ಜೀವಸಂಕುಲಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ. ಹಾಗಾಗಿ ಜಿಲ್ಲಾ ಪಂಚಾಯತಿಯಿಂದ ಪ್ರತಿ ಗ್ರಾ.ಪಂ.ಯಲ್ಲಿ ಸಾವಿರ ಗಿಡ ನೆಟ್ಟು ಬೆಳೆಸುವ ಹಸಿರು ಗ್ರಾಮ ಅಭಿಯಾನವನ್ನು ಶೀಘ್ರದಲ್ಲಿಯೇ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಶಾಸಕ ಜಿ.ಬಿ. ಜ್ಯೋತಿ ಗಣೇಶ್, ವನ್ಯಜೀವಿ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಅರಣ್ಯ ಒತ್ತುವರಿಯೇ ಪ್ರಮುಖ ಕಾರಣ. ಮನುಷ್ಯ ಇಂತಹ ಸ್ವಾರ್ಥ ಮನೋಭಾವನೆಯನ್ನು ಬಿಟ್ಟು ಅರಣ್ಯ ಸಂಪತ್ತನ್ನು ರಕ್ಷಿಸಲು ಮುಂದಾಗಬೇಕು ಎಂದು ತಿಳಿಸಿದರು.
ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಅನುಪಮ, ಅ. 8ರವರೆಗೆ ವನ್ಯ ಜೀವಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಲ್ಅರಣ್ಯ ಸಂರಕ್ಷಣೆ ಕುರಿತು ಮಕ್ಕಳು ಬಿಡಿಸಿದ ಚಿತ್ರಕಲೆಯನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಜಿಲ್ಲೆಯ ವನ್ಯ ಜೀವಿ ಸಂಕುಲಗಳ ಛಾಯಾಚಿತ್ರ ಪ್ರದರ್ಶನ ಹಾಗೂ ಚಿತ್ರಕಲೆಗಳು ಎಲ್ಲರ ಮೆಚ್ಚುಗೆ ಪಡೆದವು.