ಸುದ್ದಿಮೂಲ ವಾರ್ತೆ
ಮೈಸೂರು,ನ.24: ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ- ಮಾನವ ಸಂಘರ್ಷ ಮುಂದುವರಿದಿದೆ. ಮೈಸೂರಲ್ಲಿ ಹುಲಿ ದಾಳಿಗೆ ಮತ್ತೊಂದು ಬಲಿಯಾಗಿದೆ.
ನಂಜನಗೂಡು ತಾಲೂಕಿನಲ್ಲಿ ತಿಂಗಳ ಅಂತರದಲ್ಲಿ ಮೂರನೇ ದಾಳಿ ಇದಾಗಿದ್ದು, ಹುಲಿ ಎರಡನೇ ಬಲಿ ಪಡೆದಿದೆ. ಹುಲಿ ದಾಳಿಗೆ ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದ ರತ್ನಮ್ಮ (55) ಮೃತಪಟ್ಟಿದ್ದಾರೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಸಮೀಪವಿರುವ ಬಳ್ಳೂರುಹುಂಡಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಮಹದೇವ ನಗರ ಗ್ರಾಮದ ನರ್ಸರಿ ಸಮೀಪದ ಬಳಿ ಹಾಡಹಗಲೇ ದುರ್ಘಟನೆ ನಡೆದಿದೆ.
ಕೆಲ ದಿನಗಳ ಹಿಂದೆ ಇದೇ ಸ್ಥಳದಲ್ಲಿ ವೀರಭದ್ರ ಭೋವಿ ಎಂಬ ದನಗಾಹಿ ಮೇಲೆ ಹುಲಿ ದಾಳಿ ಮಾಡಿತ್ತು. ಅಲ್ಲದೇ ಇನ್ನೊಬ್ಬ ವ್ಯಕ್ತಿಯನ್ನು ಕೊಂದು ಹಾಕಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಎಚ್.ಡಿ ಕೋಟೆ ತಾಲ್ಲೂಕಿನಲ್ಲಿ ಬಾಲಕನೊಬ್ಬನನ್ನು ಹುಲಿ ಸಾಯಿಸಿದ್ದರೆ, ಹುಣಸೂರು ತಾಲ್ಲೂಕಿನ ಹನಗೋಡು ಬಳಿ ರೈತನನ್ನು ಸಾಯಿಸಿತ್ತು. ತಿಂಗಳ ಅಂತರದಲ್ಲಿಯೇ ಜಿಲ್ಲೆಯೊಳಗೆ ನಾಲ್ವರು ಹುಲಿ ದಾಳಿಗೆ ಬಲಿಯಾದಂತಾಗಿದೆ.
ದನ ಮೇಯಿಸುತ್ತಿದ್ದ ರತ್ನಮ್ಮ
ರತ್ನಮ್ಮ ತಮ್ಮ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಲು ಕುಳಿತಿದ್ದರು. ಈ ವೇಳೆ ಏಕಾಏಕಿ ದಾಳಿ ಮಾಡಿದ ಹುಲಿ ಆಕೆಯನ್ನು ಎಳೆದುಕೊಂಡು ಹೋಗಿದೆ. ಆಕೆ ಕೂಗಿಕೊಂಡಿದ್ದು ಹುಲಿ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಆಗಿಲ್ಲ. ಬಲವಾದ ಹೊಡೆತಕ್ಕೆ ಆಕೆಯ ಕುತ್ತಿಗೆ ಭಾಗಕ್ಕೆ ಬಲವಾದ ಏಟು ಬಿದ್ದಿದೆ. ನೆರೆಹೊರೆಯವರು ಕೂಗಿಕೊಂಡಾಗ ಎಳೆದುಕೊಂಡು ಹೋದ ಹುಲಿ ಸ್ವಲ್ಪ ದೂರದಲ್ಲಿಯೇ ದೇಹ ಬಿಟ್ಟು ಹೋಗಿದೆ.
ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಪರಮೇಶ್ವರ ಹಾಗೂ ಎ ಟಿ ನಾರಾಯಣ ಅವರು ಸಿಬ್ಬಂದಿಗಳೊಂದಿಗೆ ಹುಡುಕಾಟ ನಡೆಸಿದರು. ರತ್ನಮ್ಮ ದೇಹ ಅನತಿ ದೂರದಲ್ಲಿಯೇ ಪತ್ತೆಯಾಗಿದೆ. ಅರಣ್ಯಕ್ಕೆ ಸೇರಿದ ಪ್ರದೇಶದಲ್ಲಿಯೇ ದೇಹ ದೊರೆತಿದೆ. ದೇಹದ ಭಾಗವನ್ನು ಹುಲಿ ತಿಂದಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತದ ದೇಹವನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.