ಸುದ್ದಿಮೂಲ ವಾರ್ತೆ
ಮೈಸೂರು, ಜೂ.29:ವ್ಯಾಪಾರದ ಹಿನ್ನೆಲೆಯಲ್ಲಿ ಸಾಲದ ಹಣ ವಸೂಲಿ ಮಾಡಲು ಉದ್ಯಮಿ ಅಪಹರಿಸಿದ್ದ ಅರೋಪಿಗಳನ್ನು ನಗರದ ಲಷ್ಕರ್ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಹಳ್ಳದಕೇರಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಉದ್ಯಮಿ ಪ್ರಕಾಶ್ (35) ಅಪಹರಣಕ್ಕೊಳಗಾಗಿದ್ದರು. ಪ್ರಕಾಶ್ ರನ್ನು ಅಪಹರಿಸಿದ 5 ಮಂದಿಯನ್ನು ಪೊಲೀಸರು ಬಂಧಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.
ರಾಜಾಸ್ಥಾನ್ ಮೂಲದ ದುಗ್ಗರ್ ಸಿಂಗ್, ಬದ್ದಾರಾಮ್ ಸೇರಿದಂತೆ 5 ಮಂದಿ ಬಂಧಿತ ರಾಗಿದ್ದಾರೆ. ಹಳ್ಳದಕೇರಿಯಲ್ಲಿ ಲಲಿತಾ ಕಿಚನ್ ಸಪ್ಲೈಯರ್ಸ್ ಹೆಸರಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪ್ರಕಾಶ್, ಕೆಲವು ದಿನಗಳ ಹಿಂದೆ ದುಗ್ಗರ್ ಸಿಂಗ್ ನಿಂದ ತಮಿಳುನಾಡಿನ ವ್ಯಾಪಾರಿಯೊಬ್ಬರಿಗೆ 5.6 ಲಕ್ಷ ಮೌಲ್ಯದ ಗುಟ್ಕಾ ಕೊಡಿಸಿದ್ದರು. ಇದೇ ವಿಚಾರದಲ್ಲಿ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು .ಜೂನ್ 26 ರಂದು ಪ್ರಕಾಶ್ ತಮ್ಮ ಅಂಗಡಿಯಲ್ಲಿ ಕುಳಿತಿದ್ದ ವೇಳೆ ದುಗ್ಗರ್ ಸಿಂಗ್, ಬದ್ದಾರಾಮ್ ಸೇರಿದಂತೆ 5 ಮಂದಿ ಬಂದು ಪ್ರಕಾಶ್ ರನ್ನ ಬಲವಂತವಾಗಿ ಕಾರಿನಲ್ಲಿ ಅಪಹರಿಸಿದರು.
ಇದನ್ನು ಕಂಡ ಪಕ್ಕದ ಅಂಗಡಿಯವರು ಲಷ್ಕರ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿ ಉದ್ಯಮಿಯನ್ನು ರಕ್ಷಿಸಿದ್ದಾರೆ. ಇನ್ಸ್ಪೆಕ್ಟರ್ ಸಂತೋಷ್ ಮತ್ತು ತಂಡ ಆನೇಕಲ್ ತಾಲೂಕಿನ ಜಿಗಣಿಯ ಕಟ್ಟಡವೊಂದರಲ್ಲಿ ಪ್ರಕಾಶ್ ರನ್ನು ಬಂಧಿಸಿಟ್ಟಿರುವ ಬಗ್ಗೆ ಮಾಹಿತಿ ಕಲೆ ಹಾಕಿದರು.
ತಕ್ಷಣ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಪ್ರತಿರೋಧಿಸಿದ 5 ಅಪಹರಣಕಾರರನ್ನ ಸೆರೆ ಹಿಡಿದು ಪ್ರಕಾಶ್ ರನ್ನು ಪೊಲೀಸರು ಸೇಫ್ ಆಗಿ ಕರೆತಂದಿದ್ದಾರೆ.
ಉದ್ಯಮಿ ಪತ್ತೆಗೆ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿ ಮುತ್ತುರಾಜ್ ಹಾಗೂ ಜಾಹ್ನವಿ ಮಾರ್ಗದರ್ಶನದಲ್ಲಿ ಎಸಿಪಿ ಶಾಂತಮಲ್ಲಪ್ಪ ಉಸ್ತುವಾರಿಯಲ್ಲಿ ಲಷ್ಕರ್ ಠಾಣೆ ಇನ್ಸ್ಪೆಕ್ಟರ್ ಬಿ.ಬಿ.ಸಂತೋಷ್ ನೇತೃತ್ವದಲ್ಲಿ ಎಸ್ಸೈ ಅನಿಲ್,ಸಿಬ್ಬಂದಿಗಳಾದ ಚೇತನ್, ಚಿನ್ನಪ್ಪ, ಮಂಜು, ಕಿರಣ್, ಮಹದೇವಸ್ವಾಮಿ, ಪ್ರದೀಪ್, ರಾಥೋಡ್, ಬಾಬು, ಪ್ರಕಾಶ್ ರವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು.