ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.25: ನಿಗಮ ಮಂಡಳಿಗಳಿಗೆ ಆಯಾ ಇಲಾಖೆಯ ಸಚಿವರನ್ನೇ ಅಧ್ಯಕ್ಷರನ್ನಾಗಿ ನೇಮಿಸಿರುವ ರಾಜ್ಯ ಸರ್ಕಾರದ ನಡೆ ವಿರುದ್ಧ ಕಾಂಗ್ರೆಸ್ ಮಹಿಳಾ ನಾಯಕಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೀಗ ಮಾಜಿ ಸಚಿವೆ ರಾಣಿ ಸತೀಶ್ ನೇತೃತ್ವದಲ್ಲಿ ಮಹಿಳೆಯರು ಒಟ್ಟಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಎಂಎಲ್ಸಿ ನಾಮ ನಿರ್ದೇಶನದಲ್ಲಿ ನಮಗೂ ಆದ್ಯತೆ ನೀಡಿ ಎಂದು ಮನವಿ ಮಾಡಿದ್ದಾರೆ.
ಪಕ್ಷಕ್ಕಾಗಿ ದುಡಿದ ಮಹಿಳೆಯರಿಗೆ ಸರಿಯಾದ ಸ್ಥಾನಮಾನ ಕಲ್ಪಿಸಿಕೊಡುಂತೆ ಕಾಂಗ್ರೆಸ್ ಮಹಿಳಾ ನಾಯಕಿಯರು ಸಿಎಂ ಸಿದ್ದರಾಮಯ್ಯ ಅವರನ್ನು ಈಗಾಗಲೇ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಇದೀಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಮಹಿಳಾ ನಾಯಕಿಯರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ನೇಮಕಾತಿಯಲ್ಲಿ ಮಹಿಳೆಯರನ್ನು ಪರಿಗಣಿಸಬೇಕು. ನಿಗಮ ಮಂಡಳಿಗಳಿಗೆ ಸಚಿವರನ್ನೇ ಅಧ್ಯಕ್ಷರನ್ನಾಗಿ ಮಾಡಿದರೆ ಪಕ್ಷಕ್ಕಾಗಿ ದುಡಿದ ನಮ್ಮ ಕಥೆ ಏನು? ಪ್ರಶ್ನಿಸಿದ್ದಾರೆ.
ವಿಧಾನ ಪರಿಷತ್ಗೆ ನಾಮನಿರ್ದೇಶನ ಅಂತಿಮಗೊಳಿಸುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ನಡುವೆ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ. ತಮ್ಮ ಆಪ್ತ ಬೆಂಬಲಿಗೆ ಮಣೆ ಹಾಕಲು ಸಿಎಂ ಹಾಗೂ ಡಿಸಿಎಂ ನಡುವೆ ಪೈಪೋಟಿ ಆರಂಭವಾಗಿದೆ ಎನ್ನಲಾಗಿದೆ.
ಎಚ್.ಎಸ್ ಸುಧಾಮ್ ದಾಸ್, ಸಾಧು ಕೋಕಿಲ, ಮನ್ಸೂರ್ ಅಲಿ ಖಾನ್, ರಘುನಂದನ್ ರಾಮಣ್ಣ, ರಾಜೀವ್ ಗೌಡ, ಎಂ.ಆರ್ ಸೀತಾರಾಮ್. ಐವಾನ್ ಡಿಸೋಜ, ಉಮಾಶ್ರೀ ಸೇರಿದಂತೆ ಕೆಲ ಪ್ರಮುಖ ನಾಯಕರ ಹೆಸರು ವಿಧಾನ ಪರಿಷತ್ ಗೆ ನಾಮನಿರ್ದೇಶನವಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.