ಸುದ್ದಿಮೂಲ ವಾರ್ತೆ
ಮೈಸೂರು, ನ.20: ವರುಣ ಕ್ಷೇತ್ರ ಸೇರಿದಂತೆ ಇಡೀ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲ್ಲುವಂತೆ ಅಗಬೇಕು. ಲೋಕಸಭೆ, ವಿಧಾನಸಭೆ ಚುನಾವಣೆಯಂತೆಯೇ ಜಿಲ್ಲಾ ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಂದ್ರ ಕರೆ ನೀಡಿದರು.
ಮೈಸೂರಿನಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮೈಸೂರಿಗೂ ನನಗೂ ಅವಿನಾಭಾವ ಸಂಬಂಧವಿದೆ. ನನ್ನನ್ನು ಇಡೀ ರಾಜ್ಯಕ್ಕೆ ಪರಿಚಯ ಮಾಡಿಕೊಟ್ಟಿದ್ದು ವರುಣ ಕ್ಷೇತ್ರದ ಜನರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತೇನೆ ಎಂದರು.
ಮೈಸೂರು ಭೇಟಿ ವೇಳೆ ಚಾಮುಂಡೇಶ್ವರಿ ದೇಗುಲ, ವಿವಿಧ ಮಠಾಧಿಪತಿಗಳು, ಸಾಹಿತಿಗಳ ಜೊತೆಗೆ ಹಿರಿಯ ನಾಯಕರಾದ ಶ್ರೀನಿವಾಸಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಮಾರ್ಗದರ್ಶನ ಪಡೆದುಕೊಂಡಿದ್ದೇನೆ. ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಘೋಷಣೆ ಮಾಡುತ್ತಿದ್ದಂತೆ ಬೆಂಗಳೂರಿನ ಗಾಂಧಿನಗರದ ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿದೆ. ಇಂದು ಮೈಸೂರಿನಲ್ಲಿ ಚಾಮರಾಜ ಕ್ಷೇತ್ರದ ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿದೆ ಎಂದು ಹೇಳಿದರು.
ರಾಜ್ಯದ ಉದ್ದಗಲಕ್ಕೂ ಬಿಜೆಪಿ ಬಲಪಡಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಿಬೇಕೆಂದು ಜನರು ಮನಸ್ಸು ಮಾಡಿದ್ದಾರೆ. ಮೋದಿಯವರನ್ನು ಸೋಲಿಸುವ ಏಕೈಕ ಉದ್ದೇಶದಿದ ಪ್ರತಿಪಕ್ಷಗಳು ಇಂಡಿಯಾ ಹೆಸರಿನಲ್ಲಿ ಮೈತ್ರಿಕೂಟ ಮಾಡಿಕೊಂಡಿವೆ. ಒಳ್ಳೆಯ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿಲ್ಲ, ರಾಜಕೀಯ ದುರುದ್ದೇಶದಿಂದ ಮೈತ್ರಿ ಮಾಡಿಕೊಂಡಿವೆ ಎಂದು ವಾಗ್ದಾಳಿ ನಡೆಸಿದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಕಾರ್ಯಕರ್ತರು, ಪಕ್ಷದ ಹಿತೈಷಿಗಳು ಬಯಸುವ ರೀತಿಯಲ್ಲಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಕಾರ್ಯಕರ್ತರು ಮೈಕೊಡವಿಕೊಂಡು ಎದ್ದು ಬಂದಿದ್ದಾರೆ. ರಾಜ್ಯ ಸರ್ಕಾರ ಯಾವ ರೀತಿ ದಬ್ಬಾಳಿಕೆ ಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಮೈಸೂರಿಗೆ ವಿಜಯೇಂದ್ರ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕಿದರೆ ಜಿಲ್ಲಾಡಳಿತ ತೆರವು ಮಾಡುವಂತೆ ಹೇಳಿದೆ. ಫ್ಲೆಕ್ಸ್ಗಳನ್ನು ಎತ್ತಿಕೊಂಡು ಹೋಗುವ ರೀತಿ ಸಣ್ಣತನ ಮಾಡಿದೆ. ಇದರ ವಿರುದ್ಧ ನಾವೆಲ್ಲ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಮಾಜಿ ಸಚಿವ ಎನ್ ಮಹೇಶ್ ಮಾತನಾಡಿ, ಯಾರು ಜನರನ್ನು ತನ್ನತ್ತ ಸೆಳೆದುಕೊಂಡು ಹೋಗ್ತಾರೋ ಅವರೇ ಲೀಡರ್. ಅಂತಹ ಶಕ್ತಿ ಇರುವಂತಹ ನಾಯಕ ವಿಜಯೇಂದ್ರ. ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದು. ಯುವಕರನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಹೈಕಮಾಂಡ್ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ ಎಂದು ಪ್ರತಿಪಾದನೆ ಮಾಡಿದರು.
ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ಮಾಜಿ ಶಾಸಕರಾದ ಎನ್ ಮಹೇಶ್, ಎಲ್.ನಾಗೇಂದ್ರ, ಸಿದ್ದರಾಜು, ಸಿ ಹೆಚ್ ವಿಜಯಶಂಕರ್, ಎಂ ಶಿವಣ್ಣ, ಎಸ್ ಎ ರಾಮದಾಸ್, , ಹರ್ಷವರ್ಧನ್, ನಿರಂಜನಕುಮಾರ್, ಮುಖಂಡರಾದ ರಾಜೇಂದ್ರ, ಸಂದೇಶ್ ಸ್ವಾಮಿ, ಮಂಗಳಾ ಸೋಮಶೇಖರ್ ಸೇರಿದಂತೆ ಪ್ರಮುಖರು ಇದ್ದರು.
ಸನ್ಮಾನಕ್ಕೆ ಮುಗಿಬಿದ್ದರು.
ಬಿ ವೈ ವಿಜಯೇಂದ್ರ ಅವರನ್ನು ಸನ್ಮಾನಿಸಲು ಮುಗಿ ಬಿದ್ದ ಬಿಜೆಪಿ ಮುಖಂಡರು ಹಾಗು ಕಾರ್ಯಕರ್ತರುಸ್ಥಳೀಯ ಮುಖಂಡರು ಹಾಗು ಕಾರ್ಯಕರ್ತರಿಂದ ವಿಜಯೇಂದ್ರಗೆ ಹೂಗುಚ್ಚ ನೀಡಲು, ಹಾರ ತುರಾಯಿಗಳನ್ನು ಸಮರ್ಪಿಸಲು ಪೈಪೋಟಿ ನಡೆಯಿತು. ನೂಕುನುಗ್ಗಲಿನ ನಡುವೆ ವಿಜಯೇಂದ್ರಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಅಭಿನಂದಿಸಿದರು.