ಸುದ್ದಿಮೂಲ ವಾರ್ತೆ
ತಿಪಟೂರು,ಸೆ.11: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅವರಣದಲ್ಲಿ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳ ತಯಾರಿಕಾ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಮಕ್ಕಳಿಗೆ ಗಣಪತಿ ತಯಾರಿಕೆಯ ಬಗ್ಗೆ ಮಾವಿನಕೆರೆಯ ಕೆರೆಯಿಂದ ಜೇಡಿಮಣ್ಣನ್ನು ತರಿಸಿ ತಯಾರಿಕೆಯನ್ನು ಹೊಸಹಳ್ಳಿನಾಗರಾಜು ವಿಶಿಷ್ಟ ರೀತಿಯಲ್ಲಿ ತಿಳಿಸಿಕೊಟ್ಟರು.
ಶಿಬಿರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ವಿವಿಧ ರೀತಿಯ ಗಣೇಶನ ಮೂರ್ತಿಗಳ ತಯಾರಿಕೆಯಲ್ಲಿ ಕ್ರಿಯಾತ್ಮಕತೆಯನ್ನು ತೋರಿದರು.
ಪರಿಸರ ಪ್ರೇಮಿ ನಿಸರ್ಗ ಮುರುಳಿಧರ್ ಗುಂಗುರುಮಳೆ ಮಾತನಾಡಿ, ಸಾಂಪ್ರದಾಯಿಕವಾಗಿ ಗಣೇಶನ ಮೂರ್ತಿಯನ್ನು ತಯಾರಿಸುವುದಲ್ಲದೆ ಮಕ್ಕಳು ಮತ್ತು ಮಣ್ಣಿನ ಜೊತೆ ಉತ್ತಮ ಬಾಂಧವ್ಯ ಉಂಟಾದಾಗ ಮಣ್ಣಿನಲ್ಲಿರುವ ಕ್ರಿಯಾತ್ಮಕ ಹಾಗೂ ಸೃಜನಾತ್ಮಕ ಅಂಶಗಳು ಕೈ ಬೆರಳುಗಳ ಮೂಲಕ ನರಮಂಡಲಕ್ಕೆ ಸಂಚರಿಸಿದಾಗ ಮನುಷ್ಯನಲ್ಲಿ ಹೊಸ ಚೈತನ್ಯದ ಉಮ್ಮಸ್ಸು ಉಂಟಾಗಲಿದೆ. ಹಾಗಾಗಿ ಮಕ್ಕಳು ಮಣ್ಣಿನ ಜೊತೆ ಬೆರೆತು ಮಕ್ಕಳು ಆಟಗಳನ್ನು ಆಡಬೇಕಾಗಿದೆ ಎಂದು ತಿಳಿಸಿದರು.
ಸೊಗಡು ಜನಪದ ಹೆಜ್ಜೆಯ ಅಧ್ಯಕ್ಷ ಸಿರಿಗಂಧ ಗುರು ಮಾತನಾಡಿ, ಮಕ್ಕಳಲ್ಲಿರುವ ಕಲಿಕೆಯನ್ನು ಗುರುತಿಸುವಿಕೆಯ ಅಂಶವನ್ನು ಪ್ರತಿ ವರ್ಷವೂ ಸಹ ಸಂಘದಿಂದ ಮಾಡುತ್ತ ಬಂದು ನಮ್ಮ ಹಿಂದೂ ಸಂಪ್ರದಾಯದ ಗಣೇಶ ಮೂರ್ತಿ ಉತ್ಸವದ ಹಿಂದಿನ ವಾರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಮಕ್ಕಳಿಗೆ ಹಬ್ಬದ ಮತ್ತು ಗಣೇಶನ ಪ್ರತಿಷ್ಠಾನದ ಬಗ್ಗೆ ಅರಿವು ತಿಳಿದಂತಾಗುತ್ತದೆ ಎಂದು ತಿಳಿಸಿದರು.