ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.23:ಹಠಾತ್ ಹೃದಯಾಘಾತವಾದ ಸಂದರ್ಭದಲ್ಲಿ ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ ಮಾಡುವುದು ಸೇರಿದಂತೆ ತುರ್ತು ಆರೋಗ್ಯ ಚಿಕಿತ್ಸೆಗಳ ಕುರಿತು ಫೋರ್ಟಿಸ್ ಆಸ್ಪತ್ರೆ ವತಿಯಿಂದ ಪ್ರೆಸ್ಕ್ಲಬ್ನಲ್ಲಿ 100 ಪತ್ರಕರ್ತರಿಗೆ ಬೇಸಿಕ್ ಲೈಫ್ ಸಪೋರ್ಟ್ ತರಬೇತಿ ಕಾರ್ಯಾಗಾರ ಆಯೋಜಿಸಿತ್ತು.
ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆಯ ವತಿಯಿಂದ “ವಿಶ್ವ ಹೃದಯ ದಿನ”ದ ಪೂರ್ವಭಾವಿಯಾಗಿ ಬಿಎಲ್ಎಸ್ ಪ್ರಾಯೋಗಿಕ ತರಬೇತಿಯನ್ನು ನುರಿತ ಹೃದಯತಜ್ಞರು ನೀಡಿದರು.
ಬೇಸಿಕ್ ಲೈಫ್ ಸಪೋರ್ಟ್ ಕೌಶಲ್ಯಗಳ ಬಗ್ಗೆ ಮಾತನಾಡಿದ ಎಮರ್ಜೆನ್ಸಿ ಮೆಡಿಸನ್ ವಿಭಾಗದ ಮುಖ್ಯಸ್ಥರಾದ ಡಾ. ಇ. ಕುಮಾರಸ್ವಾಮಿ, ಎದೆ ನೋವು, ಉಸಿರಾಟದ ತೊಂದರೆ ಅಥವಾ ಅಸ್ವಸ್ಥತೆಯಂತಹ ರೋಗಲಕ್ಷಣಗಳನ್ನು ಗುರುತಿಸುವುದು ಮತ್ತು ತಕ್ಷಣದ ಸಹಾಯವನ್ನು ಪಡೆಯುವುದು ಆ ವ್ಯಕ್ತಿಯ ಜೀವ ಉಳಿಸಲು ಹೆಚ್ಚು ಪರಿಣಾಮಕಾರಿ. ಕೆಲವರಿಗೆ ಆ ಕ್ಷಣಕ್ಕೆ ಸಿಪಿಆರ್ನ ಅವಶ್ಯಕತೆಯು ಬೀಳಬಹುದು. ಆದರೆ, ಬಹುತೇಕರಿಗೆ ಸಿಪಿಆರ್ನನ್ನು ಸರಿಯಾದ ರೀತಿಯಲ್ಲಿ ಮಾಡಲು ಬರುವುದಿಲ್ಲ. ಹೀಗಾಗಿ, ಸೂಕ್ತ ರೀತಿಯಲ್ಲಿ ಹೃದಯಾಘಾತ ವ್ಯಕ್ತಿಗೆ ಸಿಪಿಆರ್ ಮಾಡುವ ವಿಧಾನವನ್ನು ಪತ್ರಕರ್ತರಿಗೆ ಹೇಳಿಕೊಡಲಾಯಿತು ಎಂದರು.
ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ನಿರ್ದೇಶಕ ಡಾ ರಾಜ್ಪಾಲ್ ಸಿಂಗ್ ಮಾತನಾಡಿ, ಹೃದಯಾಘಾತ ಯಾವ ಸಂದರ್ಭದಲ್ಲಿ ಯಾರಿಗೆ ಬರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಎದೆ ನೋವು, ಉಸಿರಾಟದ ತೊಂದರೆ ಮತ್ತು ಅತಿಯಾದ ಆಯಾಸ ಸೇರಿದಂತೆ ಕೆಲವು ಲಕ್ಷಣಗಳು ಕಂಡು ಬಂದ ಕೂಡಲೇ ಅದನ್ನು ನಿರ್ಲಕ್ಷಿಸದೇ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಹೃದಯಾಘಾತದ ಮುನ್ನೆಚ್ಚರಿಕೆ ಅರಿಯಲು ಆಗಾಗ್ಗೇ ಇಸಿಜಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು, ನಿಮ್ಮ ದೇಹದ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ನ ಪ್ರಮಾಣ ತಿಳಿದುಕೊಳ್ಳುವುದು ಅವಶ್ಯಕ. ಇದರಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ಹೃದಯಾಘಾತದಿಂದ ತಪ್ಪಿಸಿಕೊಳ್ಳಬಹುದು ಎಂದರು.