ಸುದ್ದಿಮೂಲ ವಾರ್ತೆ
ಮೈಸೂರು, ಮೇ 24: ಮೈಸೂರಿನ ಸಮತಾ ಅಧ್ಯಯನ ಕೇಂದ್ರ ಸ್ಥಾಪಿಸಿರುವ 2023ನೇ ಸಾಲಿನ ಪ್ರತಿಷ್ಠಿತ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಲೇಖಕಿ, ಸಂಶೋಧಕಿ ಬಿ.ಎಂ.ರೋಹಿಣಿ ಅವರ ‘ವೇಶ್ಯಾವಾಟಿಕೆಯ ಕಥೆ-ವ್ಯಥೆ’ ಸಂಶೋಧನಾ ಕೃತಿಯನ್ನು ಆಯ್ಕೆ ಮಾಡಲಾಗಿದೆ
ಈ ಪ್ರಶಸ್ತಿಗೆ 2019 – 2022 ರ ಅವಧಿಯಲ್ಲಿ ಮಹಿಳೆಯರಿಂದ ಪ್ರಕಟವಾದ ‘ವಿಮರ್ಶೆ ಮತ್ತು ಸಂಶೋಧನಾ ಕೃತಿಗಳನ್ನು’ ಆಹ್ವಾನಿಸಲಾಗಿತ್ತು. 46 ಲೇಖಕಿಯರು ತಮ್ಮ ಕೃತಿಗಳನ್ನು ಕಳುಹಿಸಿದ್ದರು. ಅವುಗಳನ್ನು ಅವಲೋಕಿಸಿದ ಡಾ.ಎಂ. ಉಷಾ, ಡಾ.ಸೆಲ್ವಕುಮಾರಿ ಮತ್ತು ಡಾ.ಆರ್.ಸುನಂದಮ್ಮ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಸಂಶೋಧನೆಯ ವಸ್ತು, ವ್ಯಾಪ್ತಿ, ವಿಷಯ ಮತ್ತು ಒಳನೋಟಗಳನ್ನು ಪರಿಗಣಿಸಿ ರೋಹಿಣಿಯವರ ಕೃತಿಯನ್ನು ಆಯ್ಕೆ ಮಾಡಿದೆ. 25,000 ರೂ. ನಗದು ಬಹುಮಾನ, ಫಲಕವನ್ನು ಪ್ರಶಸ್ತಿ ಒಳಗೊಂಡಿದೆ.
ಎಪ್ಪತ್ತೊಂಬತ್ತರ ಹರೆಯದಲ್ಲೂ ಓದು, ಸಂಶೋಧನೆ, ಸಂಘಟನೆ, ಸಮಾಲೋಚನೆಗಳಲ್ಲಿ ಕ್ರಿಯಾಶೀಲರಾಗಿರುವ ರೋಹಿಣಿಯವರನ್ನು ಹಲವು ಸಂಘ ಸಂಸ್ಥೆಗಳು ಗೌರವಿಸಿವೆ. ಸಮತಾ ಅಧ್ಯಯನ ಕೇಂದ್ರವು ವಿಜಯಾ ದಬ್ಬೆ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಯನ್ನು ಮೊದಲನೆಯ ವರ್ಷವೇ ಈ ಹಿರಿಯಕ್ಕನಿಗೆ ನೀಡಲು ಹೆಮ್ಮೆ ಪಡುತ್ತದೆ.
ಜೂನ್ 1ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.