ಸುದ್ದಿಮೂಲ ವಾರ್ತೆ
ಮೈಸೂರು, ಅ.24: ದಸರಾ ಮಹೋತ್ಸವದ ಕಡೆ ದಿನವಾದ ಮಂಗಳವಾರ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯದಶಮಿ ಪ್ರಯುಕ್ತ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ನಂತರ ಬನ್ನಿ ಕಡಿಯುವ ಮೂಲಕ ವಿಜಯದಶಮಿ ಪೂಜೆ ಸಂಪನ್ನಗೊಳಿಸಿದರು.
ಅರಮನೆ ಆವರಣದಿಂದ ಭುವನೇಶ್ವರಿ ದೇಗುಲದವರೆಗೆ ರಾಜವಂಶಸ್ಥ ಯದುವೀರ್ ಅವರು ವಿಜಯಯಾತ್ರೆ ಮೆರವಣಿಗೆಯಲ್ಲಿ ಬಂದು ನಂತರ ಬನ್ನಿಮರಕ್ಕೆಪೂಜೆ ಸಲ್ಲಿಸಿದರು. ನಂತರ ಅರಮನೆಗೆ ಬಂದು ಜಟ್ಟಿ ಕಾಳಗವನ್ನು ವೀಕ್ಷಿಸಿದರು.
ರಾಜರ ಕಾರುಗಳ ನಂಬರ್ ಒಂದೇ
ಮೈಸೂರಿನ ರಾಜವಂಶಸ್ಥ ಕುಟುಂಬದವರು ಬಳಸುವ ಎಲ್ಲಾ ಮಾದರಿಯ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ನೋಂದಣಿ ಸಂಖ್ಯೆ ‘1953’ ಆಗಿದೆ. ಮೈಸೂರಿನ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಜನ್ಮ ವರ್ಷ 1953. ಹೀಗಾಗಿ ಮೈಸೂರಿನ ರಾಜವಂಶಸ್ಥರು ಬಳಸುವ ಎಲ್ಲ ಕಾರುಗಳ ಸಂಖ್ಯೆ ಒಂದೇ ಆಗಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಕಾರುಗಳೆಂದರೆ ತುಂಬಾ ಇಷ್ಟವಂತೆ. ಅವರ ಬಳಿ ದುಬಾರಿ ಬೆಲೆಯ ಹಲವು ಕಾರುಗಳಿದ್ದವು. ಆ ಎಲ್ಲಾ ಕಾರುಗಳಿಗೂ 1953 ಸಂಖ್ಯೆಯ ಒಂದೇ ನಂಬರ್ ಅನ್ನು ಬಳಸಲಾಗುತ್ತದೆ. ಇದರ ಜತೆಗೆ ರಾಜಲಾಂಛನ ಗಂಡಭೇರುಂಡ ಚಿಹ್ನೆಯನ್ನು ಪ್ರತಿಯೊಂದು ಕಾರಿಗೂ ಹಾಕಲಾಗಿದೆ. ಎಲ್ಲಾ ಕಾರುಗಳಲ್ಲಿಯೂ ಇದೇ ಸಂಖ್ಯೆ ಇಂದಿಗೂ ಮುಂದುವರೆದಿದೆ.
ಯದುವೀರ್ ಒಡೆಯರ್ ಅವರಿಂದ ಕಾರುಗಳಿಗೆ ವಿಶೇಷ ಪೂಜೆ: ರಾಜವಂಶಸ್ಥ ಯದುವೀರ್ ಒಡೆಯರ್ ಸೋಮವಾರ ಅರಮನೆಯಲ್ಲಿ ಕಾರುಗಳಿಗೆ ಸಾಂಪ್ರದಾಯಿಕ ಆಯುಧ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ದುಬಾರಿ ಬೆಲೆಯ ಕಾರುಗಳ ಸಂಖ್ಯೆ 1953 ವಿಶೇಷವಾಗಿ ಗಮನ ಸೆಳೆಯಿತು.