ಸುದ್ದಿಮೂಲ ವಾರ್ತೆ
ಮೈಸೂರು, ಅ. 16 : ವೈಚಾರಿಕ , ವೈಜ್ಞಾನಿಕ ಚಿಂತನೆಗೆ ಶಿಕ್ಷಣ ಅಗತ್ಯ ಅಕ್ಷರಸ್ಥರು ಅನಕ್ಷರಸ್ಥರಂತೆ ನಡೆದುಕೊಳ್ಳುವುದಾದರೆ ಶಿಕ್ಷಣದ ಅಗತ್ಯವೇ ಇಲ್ಲ. ಮೌಢ್ಯ ಹಾಗೂ ಕಂದಾಚಾರದಿಂದ ಸಮಾಜದ ಹಿನ್ನಡೆಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿದರು
ಸೋಮವಾರ ತಾವು ಬಿಎಸ್ಸಿ ವ್ಯಾಸಂಗ ಮಾಡಿದ ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ವತಿಯಿಂದ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆದ 20ನೆಯ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜ್ಞಾನ ವಿಕಾಸವಾಗಲು ಶಿಕ್ಷಣ ಅಗತ್ಯಸಮಾಜದಲ್ಲಿ ಜಾತಿ ವ್ಯವಸ್ಥೆಯಿದೆ. ಜಾತಿಯಿಂದಲೇ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯಿದೆ. ಶೂದ್ರರು, ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದರು. ಸಮಾಜದಲ್ಲಿ ಅವಕಾಶಗಳಿಂದ, ನ್ಯಾಯದಿಂದ ವಂಚಿತರಾಗಿದ್ದರೆ, ಅವರ ಪರಿಸ್ಥಿತಿಯನ್ನು ಸುಧಾರಿಸಬೇಕು ಎಂದು ಹೇಳಿದರು.
ಶಿಕ್ಷಿತರು ಸಮಾಜದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಬೇಕು. ಚಲನೆಯಿಲ್ಲದ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವಿಲ್ಲ. ಶಿಕ್ಷಣದಿಂದ ಸಮಾಜಕ್ಕೆ ಚಲನೆ ದೊರೆತು ಆರ್ಥಿಕ, ಸಾಮಾಜಿಕ ಸಬಲತೆ ಸಾಧ್ಯವಾಗುತ್ತದೆ. ಇಂತಹ ಶಿಕ್ಷಣ, ಕಾಲೇಜುಗಳಲ್ಲಿ ದೊರೆಯಬೇಕು. ವಿಜ್ಞಾನದ ಜೊತೆಗೆ ಮೌಢ್ಯ, ಕಂದಾಚಾರಗಳಿಗೆ ಅವಕಾಶವಿಲ್ಲ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಾಧನ ಶಿಕ್ಷಣವಾಗಬೇಕು ಎಂದು ಅಭಿಪ್ರಾಯಪಟ್ಟರು.
ಜಾತಿವಿರೋಧಿ ಎಂಬ ಆರೋಪ ನನ್ನ ಮೇಲಿದೆ. ಆದರೆ ನಾನು ಯಾವ ಜಾತಿಯ ವಿರೋಧಿಯೂ ಅಲ್ಲ. ನಾನು ಸಾಮಾಜಿಕ ನ್ಯಾಯದ ಪರವಾಗಿದ್ದು, ಮನುಷ್ಯ ಜಾತಿಯ ಪರವಾಗಿದ್ದೇನೆ. ಕುವೆಂಪು ಹೇಳಿದಂತೆ, ಹುಟ್ಟುವಾಗ ಎಲ್ಲರೂ ವಿಶ್ವಮಾನವರಾಗಿದ್ದು, ಬೆಳೆದಂತೆ ಅಲ್ಪಮಾನವರಾಗುತ್ತೇವೆ. ನಾವೆಲ್ಲರೂ ವಿಶ್ವಮಾನವರಾಗಿಯೇ ಉಳಿದುಕೊಳ್ಳುವುದೇ ಶಿಕ್ಷಣದ ಗುರಿಯಾಗಬೇಕು ಎಂದರು.
ಹಳೆ ವಿದ್ಯಾರ್ಥಿಯಾಗಿ :
ಹಳೆಯ ವಿದ್ಯಾರ್ಥಿ ಸಂಘಕ್ಕೆ 20ನೇ ವರ್ಷದ ಸಮಾರಂಭಕ್ಕೆ ನಾನು ಹಳೆಯ ವಿದ್ಯಾರ್ಥಿಯಾಗಿ ಭಾಗವಹಿಸಿದ್ದೇನೆ. ಮೈಸೂರು ವಿಶ್ವವಿದ್ಯಾಲಯ ಪ್ರಾರಂಭವಾಗಿ ಶತಮಾನ ಕಳೆದಿದೆ. ಶಿಕ್ಷಣ ಸಂಸ್ಥೆ, ಕೈಗಾರಿಕೆ, ಕಲೆ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರ ಹೀಗೆ ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣರಾಗಿದ್ದಾರೆ. ಆ ಕಾಲದಲ್ಲಿ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್, ಸರ್.ಎಂ.ವಿಶ್ವೇಶ್ವರಯ್ಯ ಬಹಳ ಪ್ರಗತಿಪರರಾಗಿದ್ದರು. ಕೆಆರ್ ಎಸ್ ಜಲಾಶಯ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿ ಅವರ ಕನಸಿನ ಯೋಜನೆ. ಕಾವೇರಿ ನೀರು ನಮಗೆ ದೊರೆಯದೇ , ಮಂಡ್ಯದಲ್ಲಿ ಕಬ್ಬು, ಭತ್ತ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಡಾ.ಅಂಬೇಡ್ಕರ್ ಅವರು’ಇತಿಹಾಸ ತಿಳಿಯದವರು ಭವಿಷ್ಯ ನಿರ್ಮಿಸಲು ಸಾಧ್ಯವಿಲ್ಲ’ ಎಂದಿದ್ದರು.
ಸಿಎಂ ಆಗುವ ಕಲ್ಪನೆ ಇರಲಿಲ್ಲ
ಯುವರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ, ಮುಖ್ಯಮಂತ್ರಿಯಾಗುವ ಕಲ್ಪನೆಯೂ ಇರಲಿಲ್ಲ. ನಾನು ವೈದ್ಯನಾಗಬೇಕೆಂಬ ಆಸೆ ತಂದೆಯವರದಾಗಿತ್ತು. ಆದ್ದರಿಂದ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದೆ. 1968 ರಲ್ಲಿ ಬಿಎಸ್ ಸಿ ಪದವಿ ಪಡೆದು, ನಾಲ್ಕು ವರ್ಷಗಳ ಕಾಲ ಯುವರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವುದಾಗಿ ತಮ್ಮ ಕಾಲೇಜಿನ ದಿನಗಳ ನೆನಪುಗಳನ್ನು ಸ್ಮರಿಸಿದರು.
ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಸಮಾಜವಾದಿ ಸಭಾವನ್ನು ಸೇರಿಕೊಳ್ಳುವ ಮೂಲಕ ತಮ್ಮ ರಾಜಕೀಯ ಜೀವನ ಪ್ರಾರಂಭವಾಯಿತು ಎಂದ ವಿವರಿಸುತ್ತಿದ್ದಾಗ,‘ಹಣೆಯ ಬರಹವೇ ಕಾರಣ’ ಎಂದು ವೇದಿಕೆಯಲ್ಲಿದ್ದ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹೇಳಿದರು.
ಇದಕ್ಕೆ ವೇದಿಕೆಯಲ್ಲೇ ತೀಕ್ಣವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಹಣೆಯ ಬರಹವನ್ನೂ ಯಾರೂ ಬರೆಯುವುದಿಲ್ಲ. ವಿಜ್ಞಾನ ಓದಿದರೂ ವೈಜ್ಞಾನಿಕ ಚಿಂತನೆಯಿಲ್ಲದಿರುವುದೇ ಇಂದಿನ ದುರಂತ. ಇದಕ್ಕೆ ಹಣೆಯ ಬರಹ ಕಾರಣವಲ್ಲ, ದೊರೆತ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಜೀವನದಲ್ಲಿ ಮುಂದೆ ಬರಬಹುದು ಎಂದರು.