ಸುದ್ದಿಮೂಲ ವಾರ್ತೆ
ತುಮಕೂರು, ಜೂ. 21 : ವಿಶ್ವಕ್ಕೆ ಕೊಟ್ಟಂತಹ ಭಾರತೀಯ ಕೊಡುಗೆಗಳಲ್ಲಿ ಯೋಗವೂ ಅತ್ಯಂತ ಮಹತ್ವ ಪೂರ್ಣವಾಗಿದ್ದು, ಯೋಗ ಪ್ರತಿಯೊಬ್ಬರ ಜೀವನದ ಭಾಗವಾಗಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಬುಧವಾರ ಬೆಳಗ್ಗೆ ನಗರದ ಸಿದ್ದಗಂಗಾ ಮಠದ ಆವರಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 9ನೇ
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಾಯಾಮ ಮಾಡಿದರೆ ದೇಹಕ್ಕೆ ಮಾತ್ರ ಪುಷ್ಟಿ ಸಿಗುತ್ತದೆ. ಆದರೆ, ಯೋಗಾಸನದ ಮೂಲಕ ಮಾಡಿದರೆ ದೇಹ, ಮನಸ್ಸು, ಆತ್ಮ ಮೂರಕ್ಕೂ ಉಪಯೋಗವಾಗುತ್ತದೆ. ಕೆಲವರು ದೈಹಿಕವಾಗಿ ಚೆನ್ನಾಗಿದ್ದರೆ, ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಕೆಲವರು ಮಾನಸಿಕವಾಗಿ ಚೆನ್ನಾಗಿದ್ದರೆ, ದೈಹಿಕವಾಗಿ ಕುಗ್ಗಿ ಹೋಗಿರುತ್ತಾರೆ. ಇವೆರಡೂ ಆರೋಗ್ಯವಲ್ಲ ದೇಹ ಮತ್ತು ಮಾನಸಿಕವಾಗಿ
ಸಧೃಡವಾಗಿರುವುದೇ ನಿಜವಾದ ಆರೋಗ್ಯ. ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸವು
ಅವಶ್ಯ. ಅಂತಹವರ ಜೀವನ ಉತ್ತಮವಾಗಿರುತ್ತದೆ. ಹಾಗಾಗಿ ಯೋಗ ಪ್ರತಿಯೊಬ್ಬರ ಬದುಕಿನ ಭಾಗವಾಗಲಿ ಎಂದು ಆಶಿಸಿದರು.
ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ತಹಶೀಲ್ದಾರ್ ಸಿದ್ದೇಶ್,ಸೇರಿದಂತೆ, ಸಿದ್ದಗಂಗಾ ಮಠದ ಸಾವಿರಾರು ಮಕ್ಕಳು, ವಿವಿಧ ಇಲಾಖೆಗಳ ಇತರೆ ಅಧಿಕಾರಿ, ಸಿಬ್ಬಂದಿಗಳು, ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು, ಡಾ.ಭವ್ಯ ಅವರು ಸಾಮೂಹಿಕ ಯೋಗಾಭ್ಯಾಸದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.