ಸುದ್ದಿಮೂಲ ವಾರ್ತೆ
ಮೈಸೂರು, ಜು.3 : ಪ್ರೀತ್ಸೇ ಪ್ರೀತ್ಸೇ ಎಂದು ಹಿಂದೆ ಬಿದ್ದ ಯುವಕನ ಕಿರುಕುಳಕ್ಕೆ ಬೇಸತ್ತ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ತಾಲೂಕು ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಗಣಗರಹುಂಡಿ ಗ್ರಾಮದಲ್ಲಿ ನಡೆದಿದೆ.
ಹರ್ಷಿತಾ(21) ಮೃತ ದುರ್ದೈವಿ. ಅದೇ ಗ್ರಾಮದ ಯುವಕ ಶಿವು (26) ಕಿರುಕುಳಕ್ಕೆ ಬೇಸತ್ತ ಹರ್ಷಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪಿಯುಸಿ ಓದಿದ್ದ ಹರ್ಷಿತಾ ಕಂಪ್ಯೂಟರ್ ಕ್ಲಾಸ್ ಗೆ ಸೇರಿದ್ದಳು. ಶಿವು ಹಿಂದೆ ಬಿದ್ದು ಪ್ರೀತಸುವಂತೆ ಪೀಡಿಸುತ್ತಿದ್ದ. ಶಿವು ಮನವಿಯನ್ನ ಹರ್ಷಿತಾ ತಿರಸ್ಕರಿಸುತ್ತಿದ್ದಳು. ಈ ಮಧ್ಯೆ ಹರ್ಷಿತಾ ಮನೆಯವರು ಆಷಾಢ ನಂತರ ಮದುವೆ ದಿನಾಂಕ ಗೊತ್ತುಪಡಿಸಲು ನಿರ್ಧರಿಸಿದ್ದರು. ಈ ಮಾಹಿತಿ ಅರಿತ ಶಿವು ತನ್ನನ್ನ ಪ್ರೀತಿಸಿ ಮದುವೆ ಆಗುವಂತೆ ದುಂಬಾಲು ಬಿದ್ದ. ಶಿವು ಕಿರುಕುಳಕ್ಕೆ ಬೇಸತ್ತ ಹರ್ಷಿತ ಹುಳುಗಳಿಗಾಗಿ ಇಟ್ಟಿದ್ದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಕೂಡಲೇ ಹರ್ಷಿತಾಳನ್ನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತಾ ಮೃತಪಟ್ಟಿದ್ದಾಳೆ. ಪುತ್ರಿಯ ಸಾವಿಗೆ ಶಿವು ಕಾರಣ ಎಂದು ಹರ್ಷಿತಾ ತಂದೆ ವೇಣುಗೋಪಾಲ್ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.