ಸುದ್ದಿಮೂಲ ವಾರ್ತೆ
ಮೈಸೂರು, ಜು.10:ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಪೋಟೋವನ್ನು ಮೆರವಣಿಗೆ ವೇಳೆ ಇಡುವ ವಿಚಾರಕ್ಕೆ ಸಂಬಂಧಿಸಿದಂತೆ ಗುಂಪು ಘರ್ಷಣೆ ನಡೆದು ಯುವಕನೊಬ್ಬನ್ನು ಕೊಲೆ ಮಾಡಿದ ಘಟನೆ ಜಿಲ್ಲೆಯ ಟೀ ನರಸೀಪುರ ಪಟ್ಟಣದ ಅಗ್ನಿಶಾಮಕ ದಳದ ಕಚೇರಿಯ ಮಾರುತಿ ಸರ್ವಿಸ್ ಸ್ಟೇಷನ್ ಬಳಿ ನಡೆದಿದೆ.
ಪಟ್ಟಣದ ಶ್ರೀರಾಂಪುರ ಕಾಲೋನಿ ನಿವಾಸಿ ವೇಣುಗೋಪಾಲ್ ನಾಯಕ್ (32)ವರ್ಷ ಕೊಲೆಯಾದ ಯುವಕ. ಅವರು ಯುವ ಬ್ರಿಗೇಡ್ ನ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸೋಮವಾರ ನಡೆದ ಹನುಮ ಜಯಂತಿ ವೇಳೆ ಮೆರವಣಿಗೆಯಲ್ಲಿ ಪುನೀತ್ ರಾಜಕುಮಾರ್ ಫೋಟೋ ಇಡುವ ಸಂಬಂಧ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಈ ವೇಳೆ ಎರಡು ಗುಂಪುಗಳ ನಡುವೆ ಮಧ್ಯಸ್ಥಿಕೆ ವಹಿಸಿ ಸಮಾಧಾನ ಪಡಿಸಲಾಗಿತ್ತು.
ಎರಡು ಗುಂಪುಗಳ ನಡುವಿನ ಗಲಾಟೆ ನಡೆದು ಆರೋಪಿತ ಮಣಿ ಮತ್ತು ಅವರ ತಂಡ ವೇಣುಗೋಪಾಲ್ ಮೇಲೆ ಹಲ್ಲೆ ನಡೆಸಿತ್ತು. ಅಲ್ಲೂ ಕೂಡ ಕೆಲವರು ಮಧ್ಯ ಪ್ರವೇಶಿಸಿ ಗಲಾಟೆ ನಿಲ್ಲಿಸಿದ್ದರು.
ಮತ್ತೆ ಮಣಿ ಉರುಫ್ ಕೋಳಿ ಮಣಿ ಎಂಬುವನು ವೇಣುಗೋಪಾಲ್ ಗೆ ಕರೆಮಾಡಿ ಮಾತನಾಡಲು ಆಹ್ವಾನಿಸಿದ್ದನು. ಆದರೆ, ವೇಣುಗೋಪಾಲ್ ಹೋಗಲು ನಿರಾಕರಿಸಿದ್ದನು. ನಂತರ ವೇಣುಗೋಪಾಲ್ ತನ್ನ ಸ್ನೇಹಿತರ ಜೊತೆಗೂಡಿ ಸರ್ವಿಸ್ ಸ್ಟೇಷನ್ ಬಳಿಗೆ ಬಂದಾಗ ಏಕಾಏಕಿ ಬಾಟಲಿನಿಂದ ಹೊಡೆದು, ಹೊಟ್ಟೆಗೆ ಬಾಟಲಿಗಳಿಂದ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಸಂಬಂಧ ಪಟ್ಟಣದ ನಿವಾಸಿಗಳಾದ ಮಣಿಕಂಠ ಉ ಕೋಳಿ ಮಣಿ, ಸಂದೇಶ್, ಶಂಕರೇಗೌಡ, ಅನಿಲ್, ಮಂಜು, ಹ್ಯಾರಿಸ್ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿತರ ಇಬ್ಬರು ಪೊಲೀಸರಿಗೆ ಶರಣಾಗಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಗೋವಿಂದರಾಜು ಭೇಟಿ ನೀಡಿ ಪರಿಶೀಲಿಸಿದರು. ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.