ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ನ.2: ತಾಲ್ಲೂಕಿನ ಸಾದಲಿ ಹೋಬಳಿಯ ತಲಕಾಯಲಬೆಟ್ಟ ಗ್ರಾಮ ಹಾಗೂ ಸತ್ತ ಮುತ್ತಲಿನ ಐದು ಕಿಲೋ ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಕೀಟ ವಿಜ್ಞಾನಿಗಳು ಪರೀಕ್ಷೆ ನಡೆಸಿದ್ದು ಇಲ್ಲಿನ ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ.
ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಝೀಕಾ ವೈರಾಣು ಪತ್ತೆಯಾದ ಬೆನ್ನಲ್ಲೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ತಪಾಸಣೆಗೆ ಮುಂದಾಗಿತ್ತು. ಅದರಂತೆಯೇ ತಾಲ್ಲೂಕಿನ ದಿಬೂರಹಳ್ಳಿ, ಬಚ್ಚನಹಳ್ಳಿ, ಟಿ.ವೆಂಕಟಾಪುರ ಗ್ರಾಮಗಳಲ್ಲಿ ಪರೀಕ್ಷೆಗಳು ನಡೆದಿದ್ದವು.
ಇದರ ಬೆನ್ನಲ್ಲೇ ಗರ್ಭಿಣಿಯರು ಹಾಗೂ ಜ್ವರ ಪೀಡಿತರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ವೈರಸ್ ಪತ್ತೆ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ.
ತಲಕಾಯಲಬೆಟ್ಟ ಸುತ್ತ ಹೈ ಅಲರ್ಟ್ ಚಿಕ್ಕಬಳ್ಳಾಪುರದಲ್ಲಿ ಸೊಳ್ಳೆಯಲ್ಲಿ ಝಿಕಾ ವೈರಸ್ ಪತ್ತೆಯಾಗುತ್ತಿದ್ದಂತೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ವೈದ್ಯಾಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಹಾಸ್ಟೆಲ್ಗಳಲ್ಲಿ ರಕ್ತ ಪರೀಕ್ಷೆ ಮಾಡುವಂತೆ ಡಿಎಚ್ಓ ಸೂಚನೆ ನೀಡಿದ್ದಾರೆ. ಹೀಗಾಗಿ ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯಕೀಯ ಸಿಬ್ಬಂದಿ ಗ್ರಾಮಕ್ಕೆ ದೌಡಾಯಿಸಿದ್ದಾರೆ. ತಲಕಾಯಲಬೆಟ್ಟ ಸುತ್ತ ಐದು ಕಿ.ಮೀ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
ಗ್ರಾಮಸ್ಥರಿಂದ ತರಾಟೆ:
ತಲಕಾಯಲಬೆಟ್ಟ ಗ್ರಾಮದಲ್ಲಿ ಝಿಕಾ ವೈರಸ್ ಬಗ್ಗೆ ಅರಿವು ಮೂಡಿಸುವ ವೇಳೆ ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ತಲಕಾಯಲಬೆಟ್ಟ ಗ್ರಾಮದ ಚರಂಡಿಗಳಲ್ಲಿ ಕೊಳಕು ನೀರು ತುಂಬಿ ತಳುಕುತ್ತಿದೆ. ಸ್ವಚ್ಛತೆ ಮಾಡದ ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಕ್ಕೆ ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸೊಳ್ಳೆಗಳಲ್ಲಿ ಸೋಂಕು:
ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಝಿಕಾ ವೈರಸ್ ಪತ್ತೆ ಆಗಿದೆ. ತಲಕಾಯಲಬೆಟ್ಟ ಗ್ರಾಮದ ಬಳಿ ಕೀಟಶಾಸ್ತ್ರಜ್ಞ ಪರೀಕ್ಷಿಸಿದ ಸೊಳ್ಳೆಯೊಂದರಲ್ಲಿ ಸೋಂಕು ಕಂಡಿದೆ. ಸೋಂಕಿನ ಲಕ್ಷಣಗಳು ಕಂಡು ಬಂದಾಕ್ಷಣ ವೈದ್ಯಕೀಯ ತಪಾಸಣೆ ಮಾಡಿಸುವಂತೆ ವೈದ್ಯರಿಗೆ ಸಲಹೆ ನೀಡಿದ್ದಾರೆ.
ಎರಡು ದಿನಗಳ ಹಿಂದೆ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಡಿಎಚ್ಒ ಪ್ರಸ್ತಾಪದ ಬೆನ್ನಲ್ಲೇ ವೈದ್ಯಾಧಿಕಾರಿಗಳು ಅಲರ್ಟ್ ಆಗಿದ್ದಾರೆ.ಈ ಬಗ್ಗೆ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್ ರವರು ಮಾಹಿತಿ ನೀಡಿದ್ದು, ತಲಕಾಯಬೆಟ್ಟ ಬಚ್ಚನಹಳ್ಳಿ, ಟಿ.ವೆಂಕಟಾಪುರ ದಿಬ್ಬೂರಹಳ್ಳಿ ಗ್ರಾಮಗಳಲ್ಲಿ ಗರ್ಭಿಣಿಯರ ರಕ್ತ ಪರೀಕ್ಷೆ ಮಾಡಲಾಗಿದೆ. ರಕ್ತ ಮಾದರಿಯನ್ನು ಬೆಂಗಳೂರಿನ ಲ್ಯಾಬ್ಗೆ ರವಾನೆ ಮಾಡಲಾಗಿದೆ ಎಂದಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಆರು ಕಡೆ ಸೊಳ್ಳೆಗಳ ಪರೀಕ್ಷೆ ನಡೆಸಲಾಗಿತ್ತು ಎಂದು ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಮಹೇಶ್ ಕುಮಾರ್ ಹೇಳಿದ್ದಾರೆ. ಸೊಳ್ಳೆಗಳ ರಕ್ತ ಮಾದರಿಯನ್ನು ಬೆಂಗಳೂರಿನ ಲ್ಯಾಬ್ಗೆ ಕಳುಹಿಸಲಾಗಿತ್ತು. ಝಿಕಾ ವೈರಸ್ ಪತ್ತೆಯಾಗಿರುವ ಕುರಿತು ಕೇಂದ್ರ ಕಛೇರಿಯಿಂದ ವರದಿ ಬಂದಿತ್ತು. ಹೀಗಾಗಿ ತಕ್ಷಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮಾಹಿತಿ ನೀಡಿದ್ದೆವು. ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಹಾಗೂ ಸುತ್ತಮುತ್ತ ಐದು ಗ್ರಾಮಗಳಲ್ಲಿ ಸರ್ವೆ ಮಾಡಿದ್ದೇವೆ. ಐದು ಗ್ರಾಮಗಳಲ್ಲಿ ಮೂವತ್ತು ಗರ್ಭಿಣಿಯರ ರಕ್ತ ಮಾದರಿಯನ್ನು ಲ್ಯಾಬ್ ಕಳುಹಿಸಿದ್ದೇವೆ. ಸದ್ಯ ವರದಿಗಾಗಿ ಕಾಯುತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.