ಕಾಂಗ್ರೆಸ್ ಸರಕಾರಕ್ಕೆ ಅಧಿಕಾರದ ಮದ ನೆತ್ತಿಗೇರಿದೆ: ಬಿ.ವೈ.ವಿಜಯೇಂದ್ರ
ಸುದ್ದಿಮೂಲ ವಾರ್ತೆ
ಬೆಂಗಳೂರು, ಆ, 6: ರಾಜ್ಯದ ಕಿವುಡ, ಮಂಪರು ಕವಿದ ಕಾಂಗ್ರೆಸ್ ಸರಕಾರ ರೈತ ವಿರೋಧಿ, ಜನವಿರೋಧಿ ನೀತಿಗಳನ್ನು ಅಳವಡಿಸಿಕೊಂಡಿದೆ ಎಂದು ರಾಜ್ಯ ಉಪಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹೆಚ್ಚು ಪರಿಹಾರ ಪಡೆಯಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಸಚಿವರ ಹೇಳಿಕೆಯನ್ನು ಟೀಕಿಸಿದರು. ಕಾಂಗ್ರೆಸ್ ಸರಕಾರಕ್ಕೆ ಅಧಿಕಾರದ ಮದ ನೆತ್ತಿಗೇರಿದೆ ಎಂದು ಜನರ ಮಾತನ್ನು ಉಲ್ಲೇಖಿಸಿದರಲ್ಲದೆ, ಆ ಸಚಿವರು ರಾಜ್ಯದ ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಭರವಸೆ ಈಡೇರಿಸಲಾಗದೆ ಚಾಲಾಕಿನಿಂದ ಕೇಂದ್ರ ಸರಕಾರವನ್ನು ಟೀಕಿಸುತ್ತಾರೆ. ಬರದ ವಿಚಾರದಲ್ಲಿ ಮಾನದಂಡ ಸಡಿಲಿಸಲು ಸಿಎಂ ಕೇಂದ್ರಕ್ಕೆ ಪತ್ರ ಬರೆಯುತ್ತಾರೆ. ಇದರ ಹಿಂದೆ ದುರುದ್ದೇಶ ಇದೆ. ಗ್ಯಾರಂಟಿ ಈಡೇರಿಸಲು ಸಾಧ್ಯ ಆಗುತ್ತಿಲ್ಲ. ಸರಕಾರಿ ನೌಕರರಿಗೆ ವೇತನ ನೀಡುತ್ತಿಲ್ಲ. ಅಕ್ಕಿ ಬದಲು ಸರಿಯಾಗಿ ಹಣ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು.
ಬರಪೀಡಿತ ತಾಲ್ಲೂಕುಗಳನ್ನು ಘೋಷಿಸುವುದಾಗಿ ಕಂದಾಯ ಸಚಿವರು ಕೆಲದಿನಗಳ ಹಿಂದೆ ಹೇಳಿದ್ದಾರೆ. ಬಳಿಕ ಅದನ್ನು ಮುಂದೂಡಿದ್ದಾರೆ. ಸಮೀಕ್ಷೆ, ರಾಜ್ಯ ಪ್ರವಾಸದ ನೆಪ ಒಡ್ಡುತ್ತಿದ್ದಾರೆ. ಗ್ಯಾರಂಟಿ ಜಾತ್ರೆಗೆ ನಿಮಗೆ ಸಮಯ ಸಿಗುತ್ತದೆ. ಹಾಗಿದ್ದರೆ ನಿಮ್ಮ ಆದ್ಯತೆ ಏನು? ಎಂದು ಕೇಳಿದರು.
ರಾಜ್ಯ ಸರಕಾರಕ್ಕೆ ರೈತರ ಸಮಸ್ಯೆಗೆ ಸ್ಪಂದಿಸುವ ಕಳಕಳಿ, ಇಚ್ಛೆ ಇಲ್ಲ. ಇದಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುತ್ತಿದ್ದಾರೆ. ಬರಪೀಡಿತ ಪ್ರದೇಶ ಘೋಷಣೆ ಯಾವಾಗ? ನೀವಿಲ್ಲಿ ತಡ ಮಾಡುತ್ತೀರಿ. ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಪ್ರಾಮಾಣಿಕ ಕಳಕಳಿ ಸರಕಾರಕ್ಕೆ ಇಲ್ಲ ಎಂದು ಟೀಕಿಸಿದರು. ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ದೂರಿದರು.
ಡಿಸಿಎಂ ಶಿವಕುಮಾರ್, ಸಿಎಂ ಸಿದ್ದರಾಮಯ್ಯನವರು ಹಿಂದೆ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದರು. ಈಗ ಕೇಂದ್ರದ ವಿರುದ್ಧ ಗೂಬೆ ಕೂರಿಸುತ್ತಿದ್ದಾರೆ. ಕಾವೇರಿ ಹೋರಾಟ ಮಾಡುತ್ತಿರುವ ರೈತರು, ಕನ್ನಡಪರ ಹೋರಾಟಗಾರರ ಧ್ವನಿ ಹತ್ತಿಕ್ಕುವ ಕೆಲಸ ನಡೆದಿದೆ. ನುಡಿದಂತೆ ನಡೆಯದ ಸರಕಾರಕ್ಕೆ ರಾಜ್ಯದ ಜನರು, ರೈತರು ಶಾಪ ಹಾಕುತ್ತಿದ್ದಾರೆ ಎಂದರು.
ಲೋಡ್ ಶೆಡ್ಡಿಂಗ್ ನಿರಂತರವಾಗಿದೆ. ನನ್ನ ಕ್ಷೇತ್ರ ಶಿಕಾರಿಪುರದಲ್ಲಿ 40 ಸಾವಿರ ಪಂಪ್‍ಸೆಟ್ ಇವೆ. ನೀರು ಮೇಲೆತ್ತಿ ಹಾಯಿಸಲು ಒಂದೆರಡು ತಾಸು ಕೂಡ ಕರೆಂಟ್ ಸಿಗುತ್ತಿಲ್ಲ. 200 ಯೂನಿಟ್ ಕರೆಂಟ್ ಉಚಿತ ಎನ್ನುವ ಸರಕಾರ, ರೈತರಿಗೆ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಕೊಡುತ್ತಿಲ್ಲ. ರೈತರ ಬಗ್ಗೆ ಇವರಿಗೆ ಕನಿಕರ, ಅನುಕಂಪ ಇಲ್ಲ. ಇದು ಖಂಡನೀಯ ಎಂದರು.
ಸೆ.8ರಂದು ಹೋರಾಟ:
ರಾಜ್ಯ ಸರಕಾರದ ವೈಫಲ್ಯಗಳನ್ನು ಖಂಡಿಸಿ ಮಾಜಿ ಸಿಎಂ, ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇದೇ 8ರಂದು ಹೋರಾಟ ನಡೆಯಲಿದೆ. ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಡಾ. ಅಶ್ವತ್ಥನಾರಾಯಣ್, ಆರ್.ಅಶೋಕ್ ಮತ್ತಿತರ ಮುಖಂಡರು ಭಾಗವಹಿಸುತ್ತಾರೆ ಎಂದು ವಿವರಿಸಿದರು.
ಇದು ನುಡಿದಂತೆ ನಡೆದ ಸರಕಾರವಲ್ಲ. ಇದು ಎಡವುತ್ತಿರುವ ಸರಕಾರ ಎಂದು ರಾಜ್ಯದ ಜನತೆ ಗಮನಿಸಿದ್ದಾರೆ. ಇವರಿಗೆ ಲೋಕಸಭಾ ಚುನಾವಣೆಯಲ್ಲಿ ಜನತೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಶಾಸಕರಾದ ಬಿ. ಸುರೇಶ್ ಗೌಡ, ಸಿ.ಕೆ. ರಾಮಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.