ದಸಂಸ ಮುಖಂಡ ನಾರಾಯಣಸ್ವಾಮಿಯ ಬರ್ಬರ ಕೊಲೆ
ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಆ.25: ತಾಲೂಕಿನ ಬೈರಗಾನಹಳ್ಳಿಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ದಸಂಸ ಮುಖಂಡ 50 ವರ್ಷದ ನಾರಾಯಣಸ್ವಾಮಿಯನ್ನು ಗುರುವಾರ ರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಶಿಡ್ಲಘಟ್ಟದಿಂದ ತನ್ನೂರು ಬೈರಗಾನಹಳ್ಳಿಗೆ ಮರುತಿ ಓಮಿನಿ ವ್ಯಾನಿನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿರುವ ದುಷ್ಕರ್ಮಿಗಳು ಮಾರಕಾಯುಧಗಳಿಂದ ನಾರಾಯಣಸ್ವಾಮಿಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಇದರಿಂದ ಬೈರಗಾನಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚಿನ ಸಂಖ್ಯೆಯ ಪೊಲೀಸರು ಬೀಡು ಬಿಟ್ಟಿದ್ದು ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಶಿಡ್ಲಘಟ್ಟ ತಾಲೂಕಿನ ಪಲಿಚೇರ್ಲು ಗ್ರಾಮ ಪಂಚಾಯಿತಿಯ ಬೈರಗಾನಹಳ್ಳಿಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ದಸಂಸ ಮುಖಂಡ ಬೈರಗಾನಹಳ್ಳಿ ನಾರಾಯಣಸ್ವಾಮಿಯ ಬರ್ಬರ ಕೊಲೆಯಾಗಿದೆ. ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮುಖ್ಯ ರಸ್ತೆಯ ದ್ಯಾವಪ್ಪನಗುಡಿಯಿಂದ ಬೈರಗಾನಹಳ್ಳಿಗೆ ತಮ್ಮ ಓಮಿನಿ ವ್ಯಾನ್‍ನಲ್ಲಿ ತೆರಳುತ್ತಿದ್ದ ನಾರಾಯಣಸ್ವಾಮಿಯನ್ನು ಗುರುವಾರ ರಾತ್ರಿ ಅಡ್ಡಗಟ್ಟಿರುವ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಯಾದ ನಾರಾಯಣಸ್ವಾಮಿಯು ದಲಿತ ಸಂಘಟನೆಯಲ್ಲಿ ತೊಡಗಿದ್ದನಲ್ಲದೆ, ಸಣ್ಣ ಪುಟ್ಟ ರಿಯಲ್ ಎಸ್ಟೇಟ್‍ನ ವ್ಯವಹಾರದಲ್ಲೂ ಭಾಗಿ ಆಗಿದ್ದ. ಇತ್ತೀಚೆಗೆ ಕೊಲೆಗೀಡಾದ ನಾರಾಯಣಸ್ವಾಮಿ ಸಂಬಂಧಿಕರ ಪತ್ನಿ ಕೆಲಸಕ್ಕೆ ಬಂದಿಲ್ಲವೆಂದು ಅದೇ ಗ್ರಾಮದ ಪ್ರಮೋದ್ ಗಲಾಟೆ ಮಾಡಿದ್ದಾನೆ. ಇದೇ ವೇಳೆಯಲ್ಲಿ ಗಲಾಟೆ ಮಾಡಿದ ವ್ಯಕ್ತಿಗೆ ಬುದ್ದಿವಾದ ಹೇಳಿದ್ದರಲ್ಲದೆ, ನ್ಯಾಯ ಪಂಚಾಯಿತಿಗಳು ನಡೆಸಿ ದಿಬ್ಬೂರಹಳ್ಳಿ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಲಾಗಿತ್ತು. ಈ ವೇಳೆ ಪ್ರಮೋದ್ ಎಂಬಾತ ನಾರಾಯಣಸ್ವಾಮಿಗೆ ಪ್ರಾಣ ಬೆದರಿಕೆ ಹಾಕಿದ್ದ. ಈ ಬಗ್ಗೆ ನಾರಾಯಣಸ್ವಾಮಿಯು ತನಗೆ ಪ್ರಾಣ ಬೆದರಿಕೆ ಹಾಕಿದ ಪ್ರಮೋದ್ ಮೇಲೆ ದೂರನ್ನು ಸಹ ದಾಖಲಿಸಿದ್ದರು. ಈ ಎಲ್ಲ ಹಳೆಯ ದ್ವೇಷಗಳ ಹಿನ್ನಲೆಯಲ್ಲಿ ನಾರಾಯಣಸ್ವಾಮಿಯ ಕೊಲೆ ಆಗಿದೆ ಎನ್ನಲಾಗಿದೆ.
ನಾರಾಯಣಸ್ವಾಮಿಯ ಪುತ್ರ ಗಗನ್ ನೀಡಿದ ದೂರಿನ ಮೇರೆಗೆ ಪ್ರಮೋದ್ ಮತ್ತು ಇತರರ ಮೇಲೆ ಕೊಲೆ ಮತ್ತು ಅಟ್ರಾಸಿಟಿ ಕೇಸನ್ನು ದಿಬ್ಬೂರಹಳ್ಳಿ ಠಾಣೆಯಲ್ಲಿ ದಾಖಲಿಸಲಾಗಿದೆ. ಮೃತ ನಾರಾಯಣಸ್ವಾಮಿ ಕಡೆಯ ಗುಂಪಿನವರು ಪ್ರಮೋದ್ ಮತ್ತವರ ಕಡೆಯ ಮನೆಗಳ ಮೇಲೆ ಕಲ್ಲು ತೂರಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎಎಸ್ಪಿ ಕುಶಾಲ್ ಚೌಕ್ಸೆ, ಸಿಪಿಐ ನಂದಕುಮಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸರು, ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಪೊಲೀಸರು ಬೀಡು ಬಿಟ್ಟಿದ್ದು ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ದಲಿತ ಮುಖಂಡರ ಭೇಟಿ:
ಘಟನಾ ಸ್ಥಳಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ದಲಿತ ಸಂಘರ್ಷ ಸಮಿತಿಯ ದ್ಯಾವಕೃಷ್ಣಪ್ಪ, ವೆಂಕಟೇಶ್(ವೆಂಕಿ), ಚಲಪತಿ, ಸಿವಿ ಲಕ್ಷ್ಮಣರಾಜು, ನಗರಸಭಾ ಸದಸ್ಯ ಕೃಷ್ಣಮೂರ್ತಿ, ಕೊತ್ತನೂರು ಜ್ಞಾನೇಶ್, ನಾಗನರಸಿಂಹ, ಸೊಣ್ಣಪ್ಪ, ಮುನಿರಾಜು(ಎನ್‍ಟಿಆರ್), ವಕೀಲ ವೆಂಕಟೇಶ್ ಮತ್ತಿತರರು ಭೇಟಿ ನೀಡಿ ದಲಿತ ಮುಖಂಡ ನಾರಾಯಣಸ್ವಾಮಿ ಅವರನ್ನು ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ರೀತಿಯ ಕ್ರಮ ಜರುಗಿಸಿ ಮುಂದೆ ಈ ರೀತಿಯ ಘಟನೆಗಳು ಸಂಭವಿಸದಂತೆ ಎಚ್ಚರವಹಿಸಬೇಕೆಂದು, ಸಾಕ್ಷಿಗಳಿಗೆ ಸೂಕ್ತ ರೀತಿಯ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.