ಯಾರು ಈ ಕದಲೂರು ಉದಯ್?
ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ನಾಯಕರಲ್ಲಿ ಕದಲೂರು ಉದಯ್ ಒಬ್ಬರಾಗಿದ್ದರು. ಮದ್ದೂರು ಕ್ಷೇತ್ರದ ಮುಖಂಡ ಉದಯ್, ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ಅದರಂತೆ ಮಾರ್ಚ್ ತಿಂಗಳಲ್ಲಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕಳೆದ ಮೂರು ವರ್ಷಗಳಿಂದ ಸಮಾಜಸೇವೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಉದಯ್, ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ನೆರವಾಗುವ ಮೂಲಕ ಗಮನ ಸೆಳೆದಿದ್ದರು. ಸದ್ಯ ಮೂರನೇ ಪಟ್ಟಿಯಲ್ಲಿ ಉದಯ್ಗೆ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇದೆ.
ಉದಯ್ ಪಕ್ಷ ಸೇರ್ಪಡೆ ನಂತರ ಮಾತನಾಡಿದ್ದ ಡಿಕೆ ಶಿವಕುಮಾರ್, ಮದ್ದೂರು ಕ್ಷೇತ್ರದಲ್ಲಿ ಜೆಡಿಎಸ್ನ ಡಿಸಿ ತಮ್ಮಣ್ಣ ಅವರನ್ನು ಸೋಲಿಸಲು ಉದಯ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರ್ಪಡೆಯಾಗಿದ್ದಾರೆ ಎಂದಿದ್ದರು. ಕಾಂಗ್ರೆಸ್ ಸೇರ್ಪಡೆಗೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ಉದಯ್, ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಮದ್ದೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದರು. ಅಲ್ಲದೆ, ಮೈಸೂರು ಭಾಗದಲ್ಲಿ ಜೆಡಿಎಸ್ ಶಕ್ತಿ ಕುಂದಿಸಬೇಕು ಹಾಗೂ ಕಾಂಗ್ರೆಸ್‌ಗೆ ಶಕ್ತಿ ತುಂಬಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದಾಗಿ ಹೇಳಿದ್ದರು.