ಬಿಜೆಪಿ ಪಕ್ಷವನ್ನು ನಿಂದಿಸುವ ಬಜೆಟ್ : ಕುಮಾರಸ್ವಾಮಿ
ಸುದ್ದಿಮೂಲ ವಾರ್ತೆ
ರಾಮನಗರ, ಜು 7 : ಇದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷವನ್ನು ನಿಂದಿಸುವ ಬಜೆಟ್ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಯೋಜನೆಗಳನ್ನು ಎಟಿಎಮ್ ಮಾಡಿಕೊಳ್ಳುವ ಮುಂಗಡ ಪತ್ರ ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ಬಸವರಾಜ್ ಬೊಮ್ಮಾಯಿ ಅವರು ಲೇಖಾನುದಾನ ಪಡೆದಿದ್ದರು. ಅದರ ಮುಂದುವರೆದ ಭಾಗವೇ ಈ ಬಜೆಟ್. ನಮ್ಮ ಹಣಕಾಸು ಸಚಿವರು ದಾಖಲೆ ಸ್ಥಾಪನೆ ಮಾಡಿಕೊಳ್ಳಲು ಮಂಡಿಸಿದ ದಾಖಲೆಯ ಬಜೆಟ್ ಅಷ್ಟೇ ಇದು ಎಂದು ಟೀಕಿಸಿದ್ದಾರೆ.
ಇದನ್ನು ರಾಜ್ಯದ ಬಜೆಟ್ ಪುಸ್ತಕ ಅನ್ನುವುದಕ್ಕಿಂತ ಬಿಜೆಪಿಯ ನಿಂದನಾ ಪುಸ್ತಕ ಎಂದರೆ ಸರಿ. ಕೇಂದ್ರ ಸರ್ಕಾರ ಮತ್ತು ಹಿಂದಿನ ಬಿಜೆಪಿಯ ಸರ್ಕಾರದ ಆಡಳಿತ ಬಂದ ನಂತರ ಆರ್ಥಿಕ ಶಿಸ್ತನ್ನು ಉಲ್ಲಂಘಿಸಿ, ಸ್ವೆಚ್ಚಾಚಾರದಿಂದ ಆರ್ಥಿಕ ಶಿಸ್ತು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತಮ್ಮ ದೂರದೃಷ್ಟಿ, ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಟ್ಟು ಹೇಳುವ ಬದಲು ಕೇವಲ ಅನ್ಯರನ್ನು ತೆಗಳಲು ಬಜೆಟ್ ಅನ್ನು ಬಳಕೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡಿದೆ ಎಂದು ಬಹಳಷ್ಟು ಕಡೆ ಆರೋಪ ಮಾಡಿದ್ದಾರೆ ಎಂದು ಅವರು ಹೇಳಿದರು.
ಕನಕಪುರಕ್ಕೆ ಮೆಡಿಕಲ್ ಕಾಲೇಜು : ಟೀಕೆ
ವೈದ್ಯಕೀಯ ಕಾಲೇಜನ್ನು ರಾಮನಗರದಿಂದ ಕನಕಪುರಕ್ಕೆ ಸ್ಥಳಾಂತರ ಮಾಡಿದ್ದರ ಬಗ್ಗೆ ನಾನು ಪ್ರತಿಕ್ರಿಯಿಸಲು ಹೋಗುವುದಿಲ್ಲ. ಆದರೆ, ಮೆಡಿಕಲ್ ಕಾಲೇಜು ಎಲ್ಲಿ ಇರಬೇಕಿತ್ತು ಎನ್ನುವುದನ್ನು ಸರ್ಕಾರ ಆಲೋಚನೆ ಮಾಡಬೇಕಿತ್ತು ಎಂದಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ಮೆಡಿಕಲ್ ಕಾಲೇಜ್ ಇದ್ದರೆ ಎಷ್ಟು ಅನುಕೂಲ, ಹೊಸದಾಗಿ ನಿರ್ಮಾಣ ಆಗಿರುವ, ಅಪಘಾತಗಳಿಂದಲೇ ಕುಖ್ಯಾತಿ ಆಗಿರುವ ನೂತನ ಹೆದ್ದಾರಿ ಸಮೀಪ ಕಾಲೇಜು ಸ್ಥಾಪನೆ ಆಗಿದ್ದರೆ ಜೀವಗಳು ಉಳಿಯುತ್ತಿದ್ದವು ಎಂಬ ಬಗ್ಗೆ ಸರ್ಕಾರ ಆಲೋಚನೆ ಮಾಡಬೇಕಿತ್ತು ಎಂದು ಹೆಚ್ ಡಿ ಕೆ ಹೇಳೀದ್ದಾರೆ.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.