Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅನಧಿಕೃತ ಲೋಡ್ ಶೆಡ್ಡಿಂಗ್ ಗೆ ಮಾಜಿ ಮುಖ್ಯಮಂತ್ರಿ ಕಿಡಿ

ಸುದ್ದಿಮೂಲ ವಾರ್ತೆ

ಬೆಂಗಳೂರು: ನವರಾತ್ರಿಗೆ ಮೊದಲಿಗೆ ರಾಜ್ಯದ ಜನರಿಗೆ ಕತ್ತಲೆಭಾಗ್ಯ ಖಾತರಿಪಡಿಸಿರುವ ರಾಜ್ಯ ಕಾಂಗ್ರೆಸ್ ಸರಕಾರ ಹೊಸ ವರ್ಷಕ್ಕೆ ಅದನ್ನು ಜಾರಿ ಮಾಡಲು ಹುನ್ನಾರ ನಡೆಸಿದೆ. ಇದು ಆರನೇ ಗ್ಯಾರಂಟಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ.

ಈ ಬಗ್ಗೆ ಸುದೀರ್ಘ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಸರ್ಕಾರದ ದೂರದೃಷ್ಟಿಯ ಕೊರತೆ ಹಾಗೂ ನಿರ್ವಹಣಾ ವೈಫಲ್ಯದಿಂದ ಕರ್ನಾಟಕವನ್ನು ಇತಿಹಾಸದಲ್ಲಿ ಹಿಂದೆಂದೂ ಕಂಡೂ ಕೇಳರಿಯದ ವಿದ್ಯುತ್ ಕ್ಷಾಮಕ್ಕೆ ದೂಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರಕಾರ ಈಗಾಗಲೇ 5 ಅರೆಬರೆ ಗ್ಯಾರಂಟಿಗಳನ್ನು ಕೊಟ್ಟು ಕೈ ತೊಳೆದುಕೊಂಡಿದೆ, ಸರಿ. ಶೀಘ್ರವೇ ಅರೆಬರೆ ಅಲ್ಲದ ಪರಿಪೂರ್ಣವಾದ 6ನೇ ಗ್ಯಾರಂಟಿ (!?) ಕೊಡಲು ಸನ್ನಾಹವನ್ನೂ ನಡೆಸಿದೆ! ಅದರ ಹೆಸರು ಕತ್ತಲೆಭಾಗ್ಯ!! ಡಿಸೆಂಬರ್ ತಿಂಗಳ ಹೊತ್ತಿಗೆ ಕರ್ನಾಟಕ ಈ ಕತ್ತಲೆಭಾಗ್ಯದ ಕೂಪಕ್ಕೆ ಬೀಳುವುದು ಖಚಿತ. ಜನವರಿ; ಅಂದರೆ 2024ರ ಹೊಸ ವರ್ಷಕ್ಕೆ ತಾನು ಕೊಟ್ಟ ಗೃಹಜ್ಯೋತಿಗೆ ಎಳ್ಳುನೀರು ಬಿಟ್ಟು ಕಗ್ಗತ್ತಲ ಕರ್ನಾಟಕದ ಉದಯ ಮಾಡಿಸುವುದು ಗ್ಯಾರಂಟಿ.. ಗ್ಯಾರಂಟಿ. ಇದು ಸತ್ಯ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾವೇರಿ ಬಗ್ಗೆ ಸರಕಾರ ಕಳ್ಳಾಟ ಆಡಿದೆ. ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯದ ವಿರುದ್ಧ ನಿಲುವಳಿ ಸೂಚನೆ ಅಂಗೀಕಾರವಾಗಿದೆ. ಎಮ್ಮೆ ಚರ್ಮದ ಸರಕಾರಕ್ಕೆ ಕಾವೇರಿ ಒಡಲಾಳದ ಬೇಗುದಿ ಬಗ್ಗೆ ಜಾಣ ಕುರುಡು. ಸರಕಾರ ರಾಜ್ಯದ ಉದ್ದಗಲಕ್ಕೂ ಅನಧಿಕೃತ ಲೋಡ್ ಶೆಡ್ಡಿಂಗ್ ಹೇರಿ ದಿನಕ್ಕೆ 2 ಗಂಟೆ ವಿದ್ಯುತ್ತಿಗೂ ದಿಕ್ಕಿಲ್ಲದ ದುಸ್ಥಿತಿ ನಿರ್ಮಾಣ ಮಾಡಿದೆ. ನಮ್ಮ ರೈತರಿಗೆ ಲೋಡ್ ಶೆಡ್ಡಿಂಗ್, ತಮಿಳುನಾಡಿಗೆ ಸಮೃದ್ಧ ನೀರು!! ಎಂದು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿದ್ಯುತ್ ಅಭಾವದಿಂದ ಬೆಳೆಗಳು ಒಣಗುತ್ತಿವೆ. ನಾಲೆಗಳಲ್ಲೂ ನೀರಿಲ್ಲ, ಬೋರ್ ವೆಲ್ ಗಳಿಂದ ಪಂಪ್ ಮಾಡಲು ವಿದ್ಯುತ್ತೂ ಇಲ್ಲ. ಮೊದಲೇ ಕಷ್ಟದಲ್ಲಿರುವ ರೈತನ ಬೆನ್ನಿನ ಮೇಲೆ ಬರೆಯ ಮೇಲೆ ಬರೆ ಎಳೆಯುತ್ತದೆ ಸರಕಾರ. ವಿದ್ಯುತ್ ಕ್ಷಾಮಕ್ಕೆ ಮೊದಲೇ ಕರ್ನಾಟಕ ವಿದ್ಯುತ್ ಉತ್ಪಾದನೆಯಲ್ಲಿ ಬಂಜರು ಬಿದ್ದಿದೆ. ಉತ್ಪಾದನೆಗೆ ಅಗತ್ಯವಾದ ಮೂಲಗಳ ಕ್ಷಾಮಕ್ಕೆ ತುತ್ತಾಗಿ, ಪರರಾಜ್ಯಗಳ ಮುಂದೆ ದೈನೇಸಿಯಾಗಿ ನಿಂತು ವಿದ್ಯುತ್ ಸಾಲಕ್ಕೆ ಅರ್ಜಿ ಹಾಕಿಕೊಳ್ಳುತ್ತಿದೆ. ಜಲ, ಪವನ, ಸೌರ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ಇದು ದೂರದೃಷ್ಟಿಯ ಕೊರತೆ ಹಾಗೂ ನಿರ್ವಹಣೆಯ ವೈಫಲ್ಯ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದಿದ್ದಾರೆ.

ಜಲಾಶಯಗಳು ಖಾಲಿಯಾಗಿದ್ದು, ವಿದ್ಯುತ್ ಉತ್ಪಾದನೆ ಮಿತವಾಗಿ ಮಾಡುವಂತೆ ಸರಕಾರವೇ ಆದೇಶಿಸಿದೆ. ಇನ್ನೊಂದೆಡೆ ಉಷ್ಣ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಬವಣೆಯಿಂದ ಅಲ್ಪಸ್ವಲ್ಪ ಉತ್ಪಾದಿಸುತ್ತಿವೆ. ರಾಜ್ಯದ ಒಟ್ಟಾರೆ ಬೇಡಿಕೆಯಲ್ಲಿ ಶೇ.20ರಷ್ಟು ವಿದ್ಯುತ್ತನ್ನು ಸರಕಾರ ಹೊರಗಿನಿಂದಲೇ ಪಡೆಯುತ್ತಿದೆ. ರಾಜ್ಯವನ್ನು ವಿದ್ಯುತ್ ಸಾಲಕ್ಕೆ ತಳ್ಳಿ, ಕರುನಾಡನ್ನು ಬರ್ಬಾದ್ ಮಾಡಲಿದೆ ಕಾಂಗ್ರೆಸ್ ಸರಕಾರ. ಆದರೆ, ವಿದ್ಯುತ್ ಸಾಲ ನೀಡುವ ಸ್ಥಿತಿಯಲ್ಲಿ ಇತರೆ ರಾಜ್ಯಗಳೂ ಇಲ್ಲ. ಹಾಗಾದರೆ ಮುಂದೇನು? ಸಂಬಂಧಪಟ್ಟ ಸಚಿವರು ಮೌನವ್ರತ ಮಾಡುತ್ತಿದ್ದಾರೆಯೇ? ಎಂದು ಇಂಧನ ಸಚಿವರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಡ್ಡದಾರಿಯಲ್ಲಿ ಅಧಿಕಾರ ಪಡೆಯಲು 5 ಗ್ಯಾರಂಟಿ ಕೊಟ್ಟ ಕಾಂಗ್ರೆಸ್, 6ನೇ ಗ್ಯಾರಂಟಿ ಕತ್ತಲೆಭಾಗ್ಯವನ್ನು ನವರಾತ್ರಿಗೆ ಮೊದಲೇ ಖಾತರಿಪಡಿಸಿದೆ. ಈ ಹೊಸ ಭಾಗ್ಯ ಡಿಸೆಂಬರಿಗೋ, ಜನವರಿಗೋ ಎಂದಷ್ಟೇ ತೀರ್ಮಾನ ಆಗಬೇಕಿದೆ. ನಿರ್ವಹಣೆ, ರಿಪೇರಿ ನೆಪದಲ್ಲಿ ಇಡೀ ದಿನ ವಿದ್ಯುತ್ ಕಡಿತ ಮಾಡುತ್ತಿರುವ ಸರಕಾರದ ಸದಾರಮೆ ಆಟ ಈಗಷ್ಟೇ ಗೊತ್ತಾಗುತ್ತಿದೆ. ಹಿಂದೆ ಬರದಂತಹ ಕ್ಲಿಷ್ಟ ಸ್ಥಿತಿ ಇದ್ದರೂ ವಿದ್ಯುತ್ ಖರೀದಿಗೆ ಹಣ ಇರುತ್ತಿತ್ತು. ಈಗ ಖಜಾನೆ ಖಾಲಿಯಂತೆ!! ಎಂದು ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ ಅವರು.

ಲೋಕಸಭೆ ಚುನಾವಣೆವರೆಗೂ ಜನರನ್ನು ಗ್ಯಾರಂಟಿಗಳ ಅಮಲಿನಲ್ಲಿ ತೇಲಿಸಿ ತೇಲಿಸಿ.. ಆಮೇಲೆ ಕೈ ಎತ್ತಿಬಿಡುವ ದುಷ್ಟ ಹುನ್ನಾರ ಸರಕಾರದ್ದು. ಆ ಕಾರಣಕ್ಕಾಗಿಯೇ ಸರಕಾರ ಸತ್ಯ ಮರೆಮಾಚಿ ಮೊಸಳೆ ಕಣ್ಣೀರು ಹಾಕುತ್ತಿದೆ. ಆದರೆ, ಕತ್ತಲೆಭಾಗ್ಯ ಕರುಣಿಸುವ ಮುನ್ನ ಜನತೆಗೆ ಸತ್ಯವನ್ನೇ ಹೇಳಲಿ. ಬೇಡ ಎಂದವರು ಯಾರು? ಕೂಡಲೇ ವಿದ್ಯುತ್ ದುಸ್ಥಿತಿಯ ಬಗ್ಗೆ ಸರಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಅವರು ಒತ್ತಾಯ ಮಾಡಿದ್ದಾರೆ.

ವಿದ್ಯುತ್ ಸಾಲಕ್ಕೂ ದಿಕ್ಕಿಲ್ಲದ ಸರಕಾರವು, ಖಾಸಗಿ ವಿದ್ಯುತ್ ಪೂರೈಕೆದಾರರಿಗೆ ಕಳೆದ ಆರೇಳು ತಿಂಗಳಿಂದ ಬಾಕಿ ಹಣ ನೀಡಿಲ್ಲ ಎನ್ನುವ ಮಾಹಿತಿ ಇದೆ. ಕೆಲ ಕಂಪನಿಗಳಿಗೆ 11 ತಿಂಗಳಿಂದ ಬಿಡಿಗಾಸು ಕೊಟ್ಟಿಲ್ಲವಂತೆ. ಇದು ಹೌದಾ? ಹೌದು ಎಂದಾದರೆ, ರಾಜ್ಯದ ಭವಿಷ್ಯದ ಗತಿ ಏನು? ಕೃಷಿ, ಕೈಗಾರಿಕೆಗಳ ಪಾಡೇನು? ಬೇಕಾಬಿಟ್ಟಿ ಬೆಲೆ ಏರಿಕೆ ಬರೆ ಎಳೆಸಿಕೊಂಡು ಏದುಸಿರು ಬಿಡುತ್ತಿರುವ ಜನರಿಗೆ ಸರಕಾರದ ಉತ್ತರವೇನು? ಎಂದು ಅವರು ಪ್ರಶ್ನಿಸಿದ್ದಾರೆ.

ಕೃತಕ ಕತ್ತಲು ಸೃಷ್ಟಿಸಿ ಕಬ್ಬೆಕ್ಕಿನಂತೆ ಕದ್ದು ಹಾಲು ಕುಡಿಯುತ್ತೇವೆ ಎಂದರೆ ಆಗುವುದಿಲ್ಲ. ಜನರಿಗೂ ಕಳ್ಳಬೆಕ್ಕಿನ ಕಣ್ಣಾಮುಚ್ಚಾಲೆ ಈಗೀಗ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ