ವಖ್ಫ್ ಆಸ್ತಿಗಳ ಮಾಹಿತಿ ಸಲ್ಲಿಸುವಂತೆ ಸೂಚನೆ
ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.30 :ವಖ್ಫ್ ಬೋರ್ಡ್ ನಲ್ಲಿ ಹಲವು ವರ್ಷ ಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವವರನ್ನು ವರ್ಗಾವಣೆ ಮಾಡಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ಸೂಚಿಸಿದ್ದಾರೆ.
ವಖ್ಫ್ ಬೋರ್ಡ್ ನಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಅಸ್ತಿಗಳ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಖ್ಫ್ ಆಸ್ತಿ ಸಂರಕ್ಷಣೆ ವಿಚಾರದಲ್ಲಿ ಅಸಡ್ಡೆ ತೋರುವುದನ್ನು ಸಹಿಸುವುದಿಲ್ಲ ಎಂದು ತಾಕೀತು ಮಾಡಿದರು.
ವಖ್ಫ್ ಆಸ್ತಿಗಳ ಮಾಹಿತಿ, ನ್ಯಾಯಾಲಯ ದಲ್ಲಿರುವ ಪ್ರಕರಣ, ಲೀಸ್ ಆಧಾರದಲ್ಲಿ ನೀಡಿರುವ ಅಸ್ತಿಗಳ ಬಗ್ಗೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನೀವೆಲ್ಲ ಏನು ಮಾಡುತ್ತಿದ್ದೀರಿ. ಹತ್ತಾರು ವರ್ಷ ಗಳಿಂದ ಇದ್ದರೂ ನಿಮ್ಮ ಬಳಿ ಮಾಹಿತಿ ಇಲ್ಲ ಎಂದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.
ಹದಿನೈದು ದಿನಗಳಲ್ಲಿ ಸಮಗ್ರ ಮಾಹಿತಿ ಸಿದ್ದಪಡಿಸಬೇಕು. ಆಗಲೂ ಸೂಕ್ತ ಮಾಹಿತಿ ನೀಡದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಟ್ಟಾರೆ ವಖ್ಫ್ ಆಸ್ತಿಗಳ ಪೈಕಿ 1500 ಪ್ರಕರಣ ನ್ಯಾಯಾಲಯದಲ್ಲಿದ್ದು ಎಸಿ ಹಾಗೂ ಡಿಸಿ ನ್ಯಾಯಾಲಯ ದಲ್ಲಿ ಸೆಕ್ಷನ್ 52 ಮತ್ತು 54 ಅಡಿ ಇರುವ 675 ಪ್ರಕರಣ ಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆಯೂ ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ವಖ್ಫ್ ಬೋರ್ಡ್ ಗೆ ಆಸ್ತಿ ದಾನ ಮಾಡಿರುವವರ ಹೆಸರು, ಉದ್ದೇಶ ಹಾಗೂ ಪ್ರಸ್ತುತ ಸ್ಥಿತಿಗತಿ ಕುರಿತ ಸಂಪುಟಗಳನ್ನು ಸಚಿವರು ಬಿಡುಗಡೆ ಮಾಡಿದರು.
ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಖಾನ್ ಫರ್ವೇಜ್ ಉಪಸ್ಥಿತರಿದ್ದರು.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.