Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರಲ್ಲಿ ಹೊಸತನ ಮೂಡಿಸಿದವರು ಪ್ರೊ.ಸ್ವಾಮಿನಾಥನ್







ಕೆಲವು ದಿನಗಳ ಹಿಂದಷ್ಟೇ ಪ್ರೊಫೆಸರ್ ಎಂ.ಎಸ್. ಸ್ವಾಮಿನಾಥನ್ ಅವರು ನಮ್ಮನ್ನು ಅಗಲಿದರು. ಕೃಷಿ ವಿಜ್ಞಾನದಲ್ಲಿ ಕ್ರಾಂತಿ  ತಂದ ದಾರ್ಶನಿಕರೊಬ್ಬರನ್ನು ನಮ್ಮ ದೇಶವು ಕಳೆದುಕೊಂಡಿತು. ಆದರೂ ಭಾರತಕ್ಕೆ ಅವರ ಕೊಡುಗೆಯು ಸುವರ್ಣಾಕ್ಷರಗಳಲ್ಲಿ ಅಚ್ಚಳಿಯದೆ ಸದಾ ಅಜರಾಮರವಾಗಲಿದೆ.

ಪ್ರೊ. ಎಂ.ಎಸ್. ಸ್ವಾಮಿನಾಥನ್ ಅವರು ಭಾರತದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ನಮ್ಮ ರಾಷ್ಟ್ರ, ವಿಶೇಷವಾಗಿ ನಮ್ಮ ರೈತರು ಸಮೃದ್ಧಿಯ ಜೀವನವನ್ನು ನಡೆಸಬೇಕೆಂದು ಬಯಸಿದ್ದರು. ಶೈಕ್ಷಣಿಕವಾಗಿ ಪ್ರತಿಭಾವಂತರಾಗಿದ್ದ ಅವರಿಗೆ ಯಾವುದೇ ವೃತ್ತಿಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ, 1943ರ ಬಂಗಾಳದ ಕ್ಷಾಮ ಅವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ, ತಾವು ಮಾಡುವ ಒಂದೇ ಒಂದು ಕೆಲಸ ಯಾವುದಾದರೂ ಇದ್ದರೆ ಅದು ಕೃಷಿಯ ಅಧ್ಯಯನ ಎಂದು ಸ್ಪಷ್ಟ ಸಂಕಲ್ಪತೊಟ್ಟರು.

ವಯಸ್ಸಿನಲ್ಲಿ ಚಿಕ್ಕವರಾದರೂ ಅವರು ಡಾ. ನಾರ್ಮನ್ ಬೋರ್ಲಾಗ್ ಅವರೊಂದಿಗೆ ಸಂಪರ್ಕಕ್ಕೆ ಬಂದರು, ಜೊತೆಗೆ ಅವರ ಕೆಲಸವನ್ನು ಬಹಳ ಆಳವಾಗಿ ಅನುಸರಿಸಿದರು. 1950ರ ದಶಕದಲ್ಲಿ, ಅವರಿಗೆ ಅಮೆರಿಕದಲ್ಲಿ ಬೋಧಕರಾಗುವ ಅವಕಾಶ ಒದಗಿಬಂದಿತು. ಆದರೆ ಅವರು ಭಾರತದಲ್ಲಿ ಮತ್ತು ಭಾರತಕ್ಕಾಗಿ ಕೆಲಸ ಮಾಡಲು ಬಯಸಿದ್ದರಿಂದ ಅದನ್ನು ತಿರಸ್ಕರಿಸಿದರು.

ಸ್ವಾಮಿನಾಥನ್ ಅವರು ನಮ್ಮ ರಾಷ್ಟ್ರವನ್ನು ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದ ಪಥದತ್ತ ಮುನ್ನಡೆಸಿದ ಸವಾಲಿನ ಸಂದರ್ಭಗಳ ಬಗ್ಗೆ ನೀವೆಲ್ಲರೂ ಯೋಚಿಸಬೇಕೆಂದು ನಾನು ಬಯಸುತ್ತೇನೆ. ಸ್ವಾತಂತ್ರ್ಯದ ನಂತರದ ಮೊದಲ ಎರಡು ದಶಕಗಳಲ್ಲಿ, ಅಪಾರವಾದ ಸವಾಲುಗಳು ನಮ್ಮೆದುರಿಗಿದ್ದವು, ಅವುಗಳಲ್ಲಿ ಆಹಾರದ ಕೊರತೆಯೂ ಒಂದಾಗಿತ್ತು. 1960ರ ದಶಕದ ಆರಂಭದಲ್ಲಿ ಭಾರತವು ಕ್ಷಾಮದ ಕರಿಛಾಯೆಯೊಂದಿಗೆ ಹೋರಾಡುತ್ತಿತ್ತು. ಸರಿಯಾಗಿ ಇದೇ ಸಮಯದಲ್ಲೇ ಪ್ರೊ. ಸ್ವಾಮಿನಾಥನ್ ಅವರ ಅಚಲ ಬದ್ಧತೆ ಮತ್ತು ದೂರದೃಷ್ಟಿಯು ಕೃಷಿ ಸಮೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡಿತು. ಕೃಷಿ ಹಾಗೂ ಗೋಧಿ ತಳಿಯ ಅಭವೃದ್ಧಿಯಂತಹ ನಿರ್ದಿಷ್ಟ ಕ್ಷೇತ್ರಗಳಲ್ಲಿ ಸ್ವಾಮಿನಾಥನ್ ಅವರ ಮುಂಚೂಣಿ ಕೆಲಸವು ಗೋಧಿ ಉತ್ಪಾದನೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಯಿತು. ಇದರಿಂದಾಗಿ ಭಾರತವು ಆಹಾರ ಕೊರತೆಯ ದೇಶದ ಹಂತದಿಂದ ಸ್ವಾವಲಂಬಿ ರಾಷ್ಟ್ರವಾಗಿ ಪರಿವರ್ತನೆಯಾಯಿತು. ಈ ಅದ್ಭುತ ಸಾಧನೆಯು ಸ್ವಾಮಿನಾಥನ್ ಅವರಿಗೆ "ಭಾರತೀಯ ಹಸಿರು ಕ್ರಾಂತಿಯ ಪಿತಾಮಹ" ಎಂಬ ಬಿರುದನ್ನು ಗಳಿಸಿಕೊಟ್ಟಿತು.

ಭಾರತದಲ್ಲಿ ಅಂತರ್ಗತವಾಗಿದ್ದ "ನಾವು ಸಹ ಮಾಡಬಲ್ಲೆವು" ಎಂಬ ಮನೋಭಾವದ ಒಂದು ಮುನ್ನೋಟವನ್ನು ಹಸಿರು ಕ್ರಾಂತಿಯು ಒದಗಿಸಿತು - ನಮಗೆ ಶತಕೋಟಿ ಸವಾಲುಗಳಿದ್ದರೇನಂತೆ, ಆ ಸವಾಲುಗಳನ್ನು ಪರಿಹರಿಸಲು ನಾವೀನ್ಯತೆಯ ಜ್ವಾಲೆಯೊಂದಿಗೆ ಶತಕೋಟಿ ಮನಸ್ಸುಗಳೂ ಇಲ್ಲಿವೆ ಎಂಬ ಆಶಾಕಿರಣವನ್ನು ಹೊರ ಹೊಮ್ಮಿಸಿತು. ಹಸಿರು ಕ್ರಾಂತಿ ಪ್ರಾರಂಭವಾದ ಐದು ದಶಕಗಳ ನಂತರ, ಭಾರತೀಯ ಕೃಷಿಯು ಹೆಚ್ಚು ಆಧುನಿಕ ಮತ್ತು ಪ್ರಗತಿಪರವಾಗಿದೆ. ಆದರೆ, ಇದಕ್ಕೆ ಪ್ರೊ. ಸ್ವಾಮಿನಾಥನ್ ಅವರು ಹಾಕಿದ ಅಡಿಪಾಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಹಲವು ವರ್ಷಗಳಲ್ಲಿ, ಅವರು ಆಲೂಗಡ್ಡೆ ಬೆಳೆಗಳ ಮೇಲೆ ಪರಿಣಾಮ ಬೀರುವ ಪರಾವಲಂಬಿ ಜೀವಿಗಳನ್ನು ಎದುರಿಸುವ ಕುರಿತು ಸಂಶೋಧನೆಯನ್ನು ಕೈಗೊಂಡರು. ಅವರ ಸಂಶೋಧನೆಯು ಆಲೂಗಡ್ಡೆ ಬೆಳೆಗಳಿಗೆ ಶೀತ ಹವಾಮಾನವನ್ನು ತಡೆದುಕೊಳ್ಳಲು ಅನುವು ಮಾಡಿಕೊಟ್ಟಿತು. ಇಂದು, ಜಗತ್ತು ಸಿರಿಧಾನ್ಯಗಳು ಅಥವಾ ʻಶ್ರೀಅನ್ನʼ ಶಕ್ತಿಯುತ ಆಹಾರ (ಸೂಪರ್ ಫುಡ್) ಎಂದು ಮಾತನಾಡುತ್ತಿದೆ. ಆದರೆ ಪ್ರೊಫೆಸರ್ ಸ್ವಾಮಿನಾಥನ್ ಅವರು 1990ರ ದಶಕದಿಂದಲೇ ಸಿರಿಧಾನ್ಯಗಳ ಬಗ್ಗೆ ಚರ್ಚೆಯನ್ನು ಪ್ರೋತ್ಸಾಹಿಸಿದ್ದರು.

ಪ್ರೊ. ಸ್ವಾಮಿನಾಥನ್ ಅವರೊಂದಿಗಿನ ನನ್ನ ವೈಯಕ್ತಿಕ ಒಡನಾಟಗಳು ಬಹಳ ವ್ಯಾಪಕವಾಗಿವೆ. 2001ರಲ್ಲಿ ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವು ಪ್ರಾರಂಭವಾದವು. ಆ ದಿನಗಳಲ್ಲಿ, ಗುಜರಾತ್ ತನ್ನ ಕೃಷಿ ಪರಿಣಿತಿಗೆ ಅಷ್ಟೊಂದು ಹೆಸರುವಾಸಿಯಾಗಿರಲಿಲ್ಲ. ಸತತ ಬರಗಾಲ, ಪ್ರಚಂಡ ಸೈಕ್ಲೋನ್ ಮತ್ತು ಭೂಕಂಪವು ರಾಜ್ಯದ ಬೆಳವಣಿಗೆಯ ಪಥದ ಮೇಲೆ ಪರಿಣಾಮ ಬೀರಿತ್ತು. ನಾವು ಪ್ರಾರಂಭಿಸಿದ ಅನೇಕ ಉಪಕ್ರಮಗಳಲ್ಲಿ, ಮಣ್ಣಿನ ಆರೋಗ್ಯ ಕಾರ್ಡ್ ಕೂಡ ಒಂದಾಗಿತ್ತು. ಇದು ಮಣ್ಣನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಸಮಸ್ಯೆಗಳು ಉದ್ಭವಿಸಿದರೆ ಅವುಗಳನ್ನು ಪರಿಹರಿಸಲು ನಮಗೆ ಅನುವು ಮಾಡಿಕೊಟ್ಟಿತು. ಈ ಯೋಜನೆಯ ಹಿನ್ನೆಲೆಯಲ್ಲಿ ನಾನು ಪ್ರೊ. ಸ್ವಾಮಿನಾಥನ್ ಅವರನ್ನು ಭೇಟಿಯಾಗಿದ್ದೆ. ಅವರು ಯೋಜನೆಯನ್ನು ಶ್ಲಾಘಿಸಿದರು ಜೊತೆಗೆ, ಅದಕ್ಕಾಗಿ ತಮ್ಮ ಅಮೂಲ್ಯವಾದ ಸಲಹೆ-ಸೂಚನೆಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಈ ಯೋಜನೆಯ ಬಗ್ಗೆ ಸಂದೇಹ ಹೊಂದಿದ್ದವರಿಗೆ ಮನವರಿಕೆ ಮಾಡಲು ಅವರ ಅನುಮೋದನೆಯೊಂದೇ ಸಾಕಾಗಿತ್ತು. ಇದು ಅಂತಿಮವಾಗಿ ಗುಜರಾತ್ ನ ಕೃಷಿ ಯಶಸ್ಸಿಗೆ ವೇದಿಕೆಯನ್ನು ನಿರ್ಮಿಸಿತು.

ಮುಖ್ಯಮಂತ್ರಿಯಾಗಿ ನನ್ನ ಅಧಿಕಾರಾವಧಿಯಲ್ಲಿ ಮತ್ತು ನಾನು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಲೂ ನಮ್ಮ ಒಡನಾಟ ಮುಂದುವರಿಯಿತು. ನಾನು ಅವರನ್ನು 2016ರಲ್ಲಿ ʻಅಂತರರಾಷ್ಟ್ರೀಯ ಕೃಷಿ-ಜೀವವೈವಿಧ್ಯ ಕಾಂಗ್ರೆಸ್ʼನಲ್ಲಿ ಭೇಟಿಯಾಗಿದ್ದೆ. ಅದರ ಮುಂದಿನ ವರ್ಷ 2017ರಲ್ಲಿ, ಅವರು ಬರೆದ ಎರಡು ಭಾಗಗಳ ಪುಸ್ತಕ ಸರಣಿಯನ್ನು ನಾನೇ ಲೋಕಾರ್ಪಣೆ ಮಾಡಿದ್ದೆ.
ರೈತರು ಜಗತ್ತನ್ನು ಒಟ್ಟಿಗೆ ಬೆಸೆದು ಹಿಡಿದಿರುವ ಬಂಧಕ ಶಕ್ತಿ ಎಂದು ʻಕುರಾಲ್ʼ ಕೃಷಿಕರನ್ನು ಬಣ್ಣಿಸುತ್ತದೆ. ಏಕೆಂದರೆ ಎಲ್ಲರನ್ನೂ ಪೋಷಿಸುವುದು ರೈತರೇ. ಪ್ರೊ. ಸ್ವಾಮಿನಾಥನ್ ಅವರು ಈ ತತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಬಹಳಷ್ಟು ಜನರು ಅವರನ್ನು "ಕೃಷಿ ವೈಜ್ಞಾನಿಕ್" - ಕೃಷಿ ವಿಜ್ಞಾನಿ ಎಂದು ಕರೆಯುತ್ತಾರೆ. ಆದರೆ, ಅವರು ಅದಕ್ಕೂ ಮಿಗಿಲಾದವರಾಗಿದ್ದರು ಎಂದು ನಾನು ಸದಾ ನಂಬುತ್ತೇನೆ. ಅವರು ನಿಜವಾದ "ಕಿಸಾನ್ ವೈಜ್ಞಾನಿಕ್" - ರೈತರ ವಿಜ್ಞಾನಿ ಆಗಿದ್ದರು. ಅವರ ಹೃದಯದಲ್ಲಿ ಒಬ್ಬ ರೈತನಿದ್ದ. ಅವರ ಕಾರ್ಯ ಮತ್ತು ಕೃತಿಗಳ ಯಶಸ್ಸು ಕೇವಲ ಅವರ ಶೈಕ್ಷಣಿಕ ಉತ್ಕೃಷ್ಟತೆಗಷ್ಟೇ ಸೀಮಿತವಾಗಿಲ್ಲ; ಪ್ರಯೋಗಾಲಯಗಳ ಹೊರಗೆ, ಹೊಲ-ಗದ್ದೆಗಳಲ್ಲಿ ಅವುಗಳು ಬೀರಿದ ಪರಿಣಾಮದಲ್ಲಿ ಇದು ಅಡಗಿದೆ. ಸ್ವಾಮಿನಾಥನ್ ಅವರು ಕೈಗೊಂಡ ಕಾರ್ಯವು ವೈಜ್ಞಾನಿಕ ಜ್ಞಾನ ಮತ್ತು ಅದರ ಪ್ರಾಯೋಗಿಕ ಅನ್ವಯದ ನಡುವಿನ ಅಂತರವನ್ನು ಕಡಿಮೆ ಮಾಡಿತು. ಮಾನವ ಪ್ರಗತಿ ಮತ್ತು ಪರಿಸರ ಸುಸ್ಥಿರತೆಯ ನಡುವಿನ ಸೂಕ್ಷ್ಮ ಸಮತೋಲನವನ್ನು ಒತ್ತಿಹೇಳುವ ಮೂಲಕ ಅವರು ಸುಸ್ಥಿರ ಕೃಷಿಯನ್ನು ನಿರಂತರವಾಗಿ ಪ್ರತಿಪಾದಿಸಿದರು. ಸಣ್ಣ ರೈತರ ಜೀವನವನ್ನು ಸುಧಾರಿಸಲು ಮತ್ತು ಅಂತಹ ರೈತರು ಸಹ ನಾವಿನ್ಯತೆಯ ಫಲಗಳನ್ನು ಆನಂದಿಸುವುದನ್ನು ಖಾತರಿಪಡಿಸಲು ಪ್ರೊ. ಸ್ವಾಮಿನಾಥನ್ ನೀಡಿದ ವಿಶೇಷ ಮಹತ್ವವನ್ನು ನಾನು ಇಲ್ಲಿ ಒತ್ತಿ ಹೇಳಲೇಬೇಕು. ಮಹಿಳಾ ರೈತರ ಜೀವನವನ್ನು ಸುಧಾರಿಸುವ ಬಗ್ಗೆ ಅವರು ವಿಶೇಷವಾಗಿ ಉತ್ಸುಕರಾಗಿದ್ದರು.

ಪ್ರೊ. ಎಂ.ಎಸ್. ಸ್ವಾಮಿನಾಥನ್ ಅವರ ಬಗ್ಗೆ ಹೇಳಬೇಕಾದ ಮತ್ತೊಂದು ಗಮನಾರ್ಹವಾದ ವಿಷಯವಿದೆ - ಅವರು ನಾವೀನ್ಯತೆ ಮತ್ತು ಮಾರ್ಗದರ್ಶನದ ಪರಾಕಾಷ್ಠೆಯಾಗಿ ನಿಂತಿದ್ದಾರೆ. 1987ರಲ್ಲಿ ಅವರು ʻವಿಶ್ವ ಆಹಾರ ಪ್ರಶಸ್ತಿʼಗೆ ಭಾಜನರಾದಾಗ, ಈ ಪ್ರತಿಷ್ಠಿತ ಗೌರವದ ಮೊದಲ ಪುರಸ್ಕೃತರೆನಿಸಿದ ಅವರು ಬಹುಮಾನವಾಗಿ ಬಂದ ಹಣವನ್ನು ಲಾಭರಹಿತ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಲು ಬಳಸಿದರು. ಇಲ್ಲಿಯವರೆಗೆ, ಇದು ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕವಾದ ಕೆಲಸವನ್ನು ಕೈಗೊಂಡಿದೆ. ಸ್ವಾಮಿನಾಥನ್ ಅವರು ಅಸಂಖ್ಯಾತ ಮನಸ್ಸುಗಳನ್ನು ಪೋಷಿಸಿದ್ದಾರೆ, ಅವರಲ್ಲಿ ಕಲಿಕೆ ಮತ್ತು ನಾವೀನ್ಯತೆಯ ಉತ್ಸಾಹವನ್ನು ತುಂಬಿದ್ದಾರೆ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಸ್ವಾಮಿನಾಥನ್ ಅವರ ಜೀವನವು ಜ್ಞಾನ, ಮಾರ್ಗದರ್ಶನ ಮತ್ತು ನಾವೀನ್ಯತೆಯ ಅನಂತ ಶಕ್ತಿಯನ್ನು ನಮಗೆ ನೆನಪು ಮಾಡುತ್ತದೆ. ಅವರು ವಿವಿಧ ಸಂಸ್ಥೆಗಳ ನಿರ್ಮಾತೃವೂ ಆಗಿದ್ದರು, ಅಗಾಧ ಸಂಶೋಧನೆ ನಡೆಯುವ ಅನೇಕ ಕೇಂದ್ರಗಳನ್ನು ಅವರು ಹೊಂದಿದ್ದರು. ಮನಿಲಾದ ʻಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆʼಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. 2018ರಲ್ಲಿ ವಾರಣಾಸಿಯಲ್ಲಿ ʻಅಂತರರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆʼಯ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರವನ್ನು ತೆರೆಯಲಾಯಿತು.

ಡಾ. ಸ್ವಾಮಿನಾಥನ್ ಅವರಿಗೆ ಗೌರವ ಸಲ್ಲಿಸಲು ನಾನು ಮತ್ತೆ ʻಕುರಲ್ʼ ಅನ್ನು ಉಲ್ಲೇಖಿಸಲು ಬಯಸುತ್ತೇನೆ. "ಯೋಜನೆಯಲ್ಲಿ ದೃಢತೆಯನ್ನು ಹೊಂದಿರುವವರು, ತಾವು ಬಯಸಿದ ರೀತಿಯಲ್ಲಿ ತಾವು ಬಯಸಿದ್ದನ್ನು ಸಾಧಿಸುತ್ತಾರೆ," ಎಂಬ ಉಲ್ಲೇಖ ಅದರಲ್ಲಿದೆ. ಕೃಷಿಯನ್ನು ಬಲಪಡಿಸಲು ಮತ್ತು ರೈತರಿಗೆ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ತಮ್ಮ ಜೀವನದ ಆರಂಭದಲ್ಲಿಯೇ ಸಂಕಲ್ಪ ತೊಟ್ಟಿದ್ದ ಒಬ್ಬ ಕಟ್ಟಾಳು ಅವರಾಗಿದ್ದರು. ಅಲ್ಲದೆ, ಅವರು ತಾವು ಅಂದುಕೊಂಡಿದ್ದನ್ನು ಅಸಾಧಾರಣ ರೀತಿಯಲ್ಲಿ, ನವೀನ ರೀತಿಯಲ್ಲಿ ಮತ್ತು ಭಾವೋತ್ಕರ್ಷದಿಂದ ಮಾಡಿದರು. ನಾವು ಕೃಷಿ ನಾವೀನ್ಯತೆ ಮತ್ತು ಸುಸ್ಥಿರತೆಯ ಹಾದಿಯಲ್ಲಿ ಸಾಗುತ್ತಿರುವ ಈ ಹೊತ್ತಿನಲ್ಲಿ ಡಾ. ಸ್ವಾಮಿನಾಥನ್ ಅವರ ಕೊಡುಗೆಗಳು ನಮಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಲೇ ಇರುತ್ತವೆ. ಅವರು ಪ್ರೀತಿಸುತ್ತಿದ್ದ ತತ್ವಗಳಿಗೆ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತಲೇ ಇರಬೇಕು, ರೈತರ ಹಿತಕ್ಕಾಗಿ ಹೋರಾಡಬೇಕು ಮತ್ತು ವೈಜ್ಞಾನಿಕ ಆವಿಷ್ಕಾರದ ಫಲಗಳು ನಮ್ಮ ಕೃಷಿ ವಿಸ್ತಾರದ ಬೇರುಗಳನ್ನು ತಲುಪುವಂತೆ ಖಾತರಿಪಡಿಸಬೇಕು. ಮುಂದಿನ ಪೀಳಿಗೆಗಾಗಿ ಬೆಳವಣಿಗೆ, ಸುಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಬೇಕು.


- ನರೇಂದ್ರ ಮೋದಿ
ಪ್ರಧಾನ ಮಂತ್ರಿ







Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ