ಸುದ್ದಿಮಾಲ ವಾರ್ತೆ
ಉಡುಪಿ,ಏ.12: ಬಿಜೆಪಿ ಅಭ್ಯರ್ಥಿಗಳ ಮೊದಲನೇ ಪಟ್ಟಿ ಬಿಡುಗಡೆಯಾಗಿದ್ದು, ಉಡುಪಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಹಾಲಿ ಶಾಸಕ ರಘುಪತಿ ಭಟ್ ಕೇಂದ್ರ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಟಿಕೆಟ್ ನೀಡದಿರುವ ಪಕ್ಷದ ನಿರ್ಧಾರದ ಬಗ್ಗೆ ನನಗೆ ಬೇಸರ ಇಲ್ಲ. ಆದರೆ, ಪಕ್ಷ ನಡೆದುಕೊಂಡ ರೀತಿಯ ಬಗ್ಗೆ ನನಗೆ ಬೇಸರವಾಗಿದೆ ಎಂದು ಅವರು ಹೇಳಿದ್ದಾರೆ.
ನನಗೆ ಟಿಕೆಟ್ ಸಿಗುತ್ತದೆಯೇ ಇಲ್ಲವೇ ಎಂಬುದನ್ನು ನಾನು ಟಿ.ವಿ. ಯಲ್ಲಿ ನೋಡಬೇಕೆ? ಒಂದು ವೇಳೆ ಅವರು ಟಿಕೆಟ್ ಕೊಡುವುದಿಲ್ಲ ಎಂದು ಮೊದಲೇ ಹೇಳಿದ್ದರೆ ನಾನು ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರ ಮಾದರಿಯಲ್ಲಿಯೇ ರಾಜೀನಾಮೆ ನೀಡುತ್ತಿದ್ದೆ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷವು ಮೊದಲೇ ಸೂಚಿಸಿರುವಂತೆ ಹೊಸ ನಾಯಕರ ಆಯ್ಕೆಯ ಹಿನ್ನೆಲೆ ಹಾಲಿ ಶಾಸಕರನ್ನು ಕೈಬಿಟ್ಟಿದ್ದು, ಅದರಿಂದ ಹಲವಾರು ಬಿಜೆಪಿ ನಾಯಕರು ಬೇಸರ ವ್ಯಕ್ತ ಪಡಿಸಿದ್ದಾರೆ. ಅನೇಕ ವರ್ಷಗಳಿಂದ ಪಕ್ಷ ಕಟ್ಟಿದ್ದೇವೆ. ಈಗ ಏಕಾಏಕಿ ಪಕ್ಷದ ಟಿಕೆಟ್ನಿಂದ ವಂಚಿತಗೊಳಿಸಿದರೆ ಬೇಸರವಾಗುವುದೆಲ್ಲವೇ ಎಂದು ರಘುಪತಿ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ.