ಸುದ್ದಿಮೂಲ ವಾರ್ತೆ
ನವದೆಹಲಿ, ಮೇ 18: ತೀವ್ರ ಕಗ್ಗಂಟಾಗಿದ್ದ ಮುಖ್ಯಮಂತ್ರಿ ಆಯ್ಕೆ ವಿಚಾರ ಬುಧವಾರ ತಡರಾತ್ರಿ ಕೊನೆಗೂ ಬಗೆಹರಿದಿದೆ. ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಆಗಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿದ್ದ ತೀವ್ರ ರಾಜ್ಯ ರಾಜಕೀಯ ಬೆಳವಣಿಗೆ ಗುರುವಾರ ತಡರಾತ್ರಿ ಕೊನೆಗೊಂಡಿದೆ. ಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಮನವೊಲಿಸುವಲ್ಲಿ ಕೊನೆಗೂ ಹೈಕಮಾಂಡ್ ನಾಯಕರು ಯಶಸ್ವಿ ಆಗಿದ್ದಾರೆ.
ಪೂರ್ಣ ಅವಧಿಗೆ ಮುಖ್ಯಮಂತ್ರಿ ಮಾಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಪಕ್ಷಕ್ಕಾಗಿ ದುಡಿದು 135 ಶಾಸಕರನ್ನು ಗೆಲ್ಲಿಸುವಲ್ಲಿ ತನು ಮನ ಧನ ಅರ್ಪಿಸಿದ ತಮ್ಮನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಡಿ.ಕೆ. ಶಿವಕುಮಾರ್ ಸಹ ಪಟ್ಟು ಹೊಡಿದಿದ್ದರು. ಇಬ್ಬರ ಹೋರಾಟದಿಂದಾಗಿ ರಾಜ್ಯದಲ್ಲಿ ಪೂರ್ಣ ಬಹುಮತ ಪಡೆದ ಕಾಂಗ್ರೆಸ್ ಸರ್ಕಾರ ರಚೆನೆಗೆ ಹಿನ್ನಡೆ ಆಗಿತ್ತು.
30-30 ಸೂತ್ರ:
ಮುಖ್ಯಮಂತ್ರಿ ಹುದ್ದೆಯನ್ನು 30-30 ಸೂತ್ರದಡಿ ಹಂಚಿಕೆ ಮಾಡಲಾಗಿದೆ. ಅಂದರೆ ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಬೇಕು. ನಂತರದ ಎರಡೂವರೆ ವರ್ಷದ ಅವಧಿಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು. ಹೈಕಮಾಂಡ್ ಸೂತ್ರಕ್ಕೆ ಮೊದಲು ವಿರೋಧ ತೋರುತ್ತಿದ್ದ ಡಿ.ಕೆ. ಶಿವಕುಮಾರ್ ಕೊನೆಗೂ ಅನಿವಾರ್ಯವಾಗಿ ಒಪ್ಪಿಕೊಂಡಿದ್ದಾರೆ.
ಅಲ್ಲದೆ, ಅಧಿಕಾರ ಹಂಚಿಕೆಯ ಸೂತ್ರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಘೋಷಿಸಬೇಕು ಎಂದು ಪಟ್ಟು ಹಿಡಿದ ಕಾರಣ ನವದೆಹಲಿಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ಪತ್ರಿಕಾಗೋಷ್ಠಿ ಕರೆದಿದ್ದಾರೆ.
ಈ ಮಧ್ಯೆ ಇಂದು ರಾತ್ರಿ 7 ಗಂಟೆಗೆ ಕೆಪಿಸಿಸಿ ನೂತನ ಕಚೇರಿಯಲ್ಲಿ ಮೊದಲ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಇಲ್ಲಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತದೆ.
ಉಪಮುಖ್ಯಮಂತ್ರಿಗಳ ಆಯ್ಕೆ ವಿಚಾರವೂ ಮುನ್ನೆಲೆಗೆ ಬಂದಿದ್ದು, ತಾವು ಒಬ್ಬರೇ ಡಿಸಿಎಂ ಆಗಿ ಇರಬೇಕು. ಮೂರು-ನಾಲ್ಕು ಜನರನ್ನು ಉಪಮುಖ್ಯಮಂತ್ರಿ ಮಾಡುವುದು ಬೇಡ ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ. ಹೈಕಮಾಂಡ್ ಯಾವ ನಿರ್ಧಾರ ತಳೆಯುತ್ತದೆ ಎಂಬುದನ್ನು ಕಾದು ನೋಡಬೇಕು.