ಸುದ್ದಿಮೂಲ ವಾರ್ತೆ
ಮೈಸೂರು, ಜೂ.13 : ವಿದ್ಯುತ್ ದರ ಏರಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಇದರಿಂದ ಬೇಸತ್ತು ರಾಜ್ಯದ ಜನ ಹೈರಾಣಾಗಿ ಸರ್ಕಾರ ಮತ್ತು ಎಸ್ಕಾಂಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಾನಾ ಜಿಲ್ಲೆಗಳಲ್ಲಿ ವ್ಯಾಪಾರಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ದರ ಏರಿಕೆ ಸಮಸ್ಯೆಗಳು ಹಾಗೂ ಅದರ ಮರು ಪರಿಷ್ಕರಣೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು, ಪತ್ರದ ಸಾರಾಂಶ ಹೀಗಿದೆ.
ಬಿಜೆಪಿ ಕೆಟ್ಟ ಆಡಳಿತದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಂಡ ಜಯ ಗಳಿಸಿದೆ. ಸರ್ಕಾರ ರಚನೆಯಾದ ದಿನವೇ 5 ಗ್ಯಾರಂಟಿ ಘೋಷಣೆ ಮಾಡಲಾಗಿದೆ. ಗ್ಯಾರಂಟಿಗಳಲ್ಲಿ ಒಂದಾದ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆಗೆ ವ್ಯತಿರಿಕ್ತವೆಂಬಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿ (ಕೆಇಆರ್ಸಿ) ಯಿಂದ ರಾಜ್ಯದ ಎಲ್ಲಾ ನಿಗಮಗಳಲ್ಲಿ ವಿದ್ಯುತ್ ದರ ಹೆಚ್ಚಿಸಲಾಗಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಚೇತರಿಸಿಕೊಳ್ಳದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸ್ತುತ ಸರ್ಕಾರ ಘೋಷಿಸಿರುವ 200 ಯೂನಿಟ್ ಉಚಿತ ಸೌಲಭ್ಯವನ್ನು ಜನ ಸಾಮಾನ್ಯರಿಗೆ ನೀಡಿ ಕಿತ್ತುಕೊಂಡಂತಾಗಿದೆ. ಹೀಗಾಗಿ ವಿದ್ಯುತ್ ದರ ಏರಿಕೆಯನ್ನು ಮರು ಪರಿಶೀಲನೆ ಮಾಡಿ, ಸಾರ್ವಜನಿಕ ಹಿತದೃಷ್ಟಿಯಿಂದ ವಿದ್ಯುತ್ ಬೆಲೆ ಏರಿಕೆ ಆದೇಶವನ್ನು ಪರಿಶೀಲಿಸಿ.ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಮರು ಜಾರಿಗೊಳಿಸುವುದು ಅಗತ್ಯವಾಗಿದೆ.ಸಾರ್ವಜನಿಕ ಹಿತದೃಷ್ಟಿಯಿಂದ ವಿದ್ಯುತ್ ಬೆಲೆ ಏರಿಕೆ ಆದೇಶವನ್ನು ಪರಿಶೀಲಿಸಿ. ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಮರು ಜಾರಿಗೊಳಿಸಿ ಎಂದು ಮನವಿ ಮಾಡಿದ್ದಾರೆ.